ಬೆಳಗಾವಿ: ಸಿಎಂ ಯಡಿಯೂರಪ್ಪ ಸದ್ಯ ಎಲ್ಲವನ್ನು ಕಳೆದುಕೊಂಡು ತಬ್ಬಲಿ ನೀನಾದೆಯಾ ಮಗನೆ ಎನ್ನುವ ಪರಿಸ್ಥಿತಿಯಲ್ಲಿದ್ದಾರೆ. 17 ಜನ ಅತೃಪ್ತರ ಸಲುವಾಗಿ ಬೆಂಗಳೂರಿನಿಂದ ದೆಹಲಿಗೆ ಸುತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಇಂದು ನಗರದಲ್ಲಿ ಕೇಂದ್ರ ಸರ್ಕಾರ ಪ್ರವಾಹ ಪರಿಹಾರ ನೀಡುವುದಕ್ಕೆ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಇಬ್ರಾಹಿಂ ಪಾಲ್ಗೊಂಡಿದ್ದರು. ಈ ವೇಳೆ ಮತನಾಡಿದ ಅವರು, ಪ್ರವಾಹ ಉಂಟಾಗಿ ತಿಂಗಳಾದರು ಕೇಂದ್ರ ಹಣ ಬಿಡುಗಡೆ ಮಾಡಲಿಲ್ಲ. ಕರ್ನಾಟಕದಿಂದ ಯಾವೊಬ್ಬ ಸಂಸದನಿಗೆ ಮೋದಿ ಹತ್ತಿರ ಹಣ ಕೇಳುವ ಧೈರ್ಯವಿಲ್ಲ. ನಮ್ಮ ಜನರಿಗೆ ನ್ಯಾಯ ಒದಗಿಸಲು ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಯಡಿಯೂರಪ್ಪ ಬಳಿ ಕೇವಲ ಅಧಿಕಾರ ಮಾತ್ರ ಇದೆ. ಸರ್ಕಾರದಲ್ಲಿ ಹಣವಿಲ್ಲ. ಮೋದಿ ನಮ್ಮ ಸಂಕಷ್ಟ ಮರೆತು ಅಮೆರಿಕಾದಲ್ಲಿ ಕಾರ್ಯಕ್ರಮ ಮಾಡಲು ಹೋಗಿದ್ದಾರೆ. ಕೇಂದ್ರದಲ್ಲಿ ಅಧಿಕಾರ ನಡಿಸುವವರಿಗೆ ಮಾತೃ ಹೃದಯ ಇರಬೇಕು. ಅದು ಮೋದಿ ಹತ್ತಿರ ಇಲ್ಲ ಎಂದು ವ್ಯಂಗ್ಯವಾಡಿದರು.