ಬೆಳಗಾವಿ: ಈ ರಾಜ್ಯವನ್ನು ಬಿಜೆಪಿಗರು ಹಾಳು ಮಾಡಿದ್ದಾರೆ. ಆರ್ಥಿಕವಾಗಿ, ಭ್ರಷ್ಟಾಚಾರ, ಧರ್ಮ ರಾಜಕಾರಣ ಮಾಡಿದ್ದಾರೆ. ನಾವು 135 ಸ್ಥಾನ ಗೆದ್ದಿದ್ದರಿಂದ ಬಿಜೆಪಿಗರಿಗೆ ಭಯ ಆರಂಭವಾಗಿದೆ. ಎಷ್ಟೇ ದುಡ್ಡು ಖರ್ಚು ಮಾಡಿದರೂ, ಗೆಲ್ಲಲಿಲ್ಲ ಎಂದು ಹತಾಶರಾಗಿದ್ದಾರೆ. ಲೋಕಸಭೆಯಲ್ಲಿ ಅವರಿಗೆ ಸೋಲುವ ಭಯ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಬಿನ್ ಲಾಡನ್ ಸರ್ಕಾರ ಎಂಬ ಆರ್.ಅಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, "ಲೋಕಸಭೆ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯ ಅವರಿಗೆ ಶುರುವಾಗಿದೆ. ನಾವು ಗ್ಯಾರಂಟಿಗಳನ್ನು ಜಾರಿಗೆ ತಂದ ಬಳಿಕ ಹತಾಶರಾಗಿ ಬಾಯಿಗೆ ಬಂದ ಹಾಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ" ಎಂದು ಕಿಡಿಕಾರಿದರು.
ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಕೆಂಪಣ್ಣ ಒತ್ತಾಯ ವಿಚಾರದ ಬಗ್ಗೆ ಮಾತನಾಡಿ, "ಹಣ ಬಾಕಿ ಉಳಿದಿರೋದು ಯಾರ ಕಾಲದಲ್ಲಿ ಆಗಿರೋ ಕೆಲಸ. ಹಿಂದಿನ ಬಿಜೆಪಿ ಸರ್ಕಾರ ಬಾಕಿ ಉಳಿಸಿ ಹೋಗಿದೆ. ಹಿಂದಿನ ಸರ್ಕಾರ ಎರಡು ವರ್ಷ, ಮೂರು ವರ್ಷ ಬಿಲ್ ಕೊಟ್ಟಿಲ್ಲ. ನಾವು ಬಂದು ಇನ್ನೂ ಮೂರು ತಿಂಗಳು ಕೂಡ ಆಗಿಲ್ಲ. ಅದರ ಮೇಲೂ ನಮಗೆ ಒತ್ತಡ ಹಾಕುತ್ತಿದ್ದಾರೆ" ಎಂದು ಗುಡುಗಿದರು.
ಅಲ್ಲದೇ, "ನಾವು ಶೇ 40ರಷ್ಟು ಕಮಿಷನ್ ದಂಧೆಯ ಬಗ್ಗೆ ಮಾತನಾಡಿದ್ದೆವು. ಈ ಬಗ್ಗೆ ತನಿಖೆ ಮಾಡಬೇಕು. ಗುಣಮಟ್ಟದ ಕೆಲಸ ಆಗಿದೆಯಾ ಇಲ್ವಾ ಎಂದು ತನಿಖೆ ನಡೆಸುತ್ತೇವೆ. ಗುತ್ತಿಗೆದಾರರಿಗೆ ಬಿಲ್ ಕೊಡುವುದು ಬೇಡ ಅನ್ನೋದಿಲ್ಲ. ಕಾಮಗಾರಿ ಕುರಿತು ತನಿಖೆ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ನಾಲ್ಕು ತಂಡ ರಚನೆ ಮಾಡಿ ತನಿಖೆ ಮಾಡಿಸುತ್ತಿದ್ದೇವೆ. ವರದಿ ಕೊಟ್ಟ ಬಳಿಕ ತಪ್ಪು ಮಾಡಿಲ್ಲ ಅಂದ್ರೆ ಖಂಡಿತ ಬಿಲ್ ಕೊಡುತ್ತೇವೆ. ತಪ್ಪು ಮಾಡಿರುವುದು ಸಾಬೀತಾದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ" ಎಂದರು.
ಮುಂದುವರೆದು, "ಮೂರು ವರ್ಷಗಳಿಂದ ಬಿಲ್ ಕೊಟ್ಟಿಲ್ಲ. ಯಾಕೆ ಕೊಡಲಿಲ್ಲ, ಯಾಕೆ ಬಿಟ್ಟು ಹೋದ್ರು. ನಾವು ಯಾರಿಗೂ ತೊಂದರೆ ಕೊಡಲ್ಲ. ಮೂರು ವರ್ಷ ಬಿಲ್ ಕೊಡದೇ ಇರುವವರು ಈಗ ಏನ್ ಹೋರಾಟ ಮಾಡುತ್ತಾರೆ. ಅವರಿಗೆ ಅದರ ಅಗತ್ಯ ಏನಿದೆ? ಸುಮ್ಮನೆ ಇರಲಾಗದೆ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಹೊಟ್ಟೆ ಉರಿ ಶುರುವಾಗಿದೆ. ಹಾಗಾಗಿ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ಚಲುವರಾಯಸ್ವಾಮಿ, ಡಿಕೆಶಿ ಮೇಲೆಯೂ ಆರೋಪ ಬಂದಿದೆ. ಇವತ್ತು ಕೆಂಪಣ್ಣ ಯಾವ ಆರೋಪ ಮಾಡಿದ್ದಾರೆ. ಯಾವುದೇ ಭ್ರಷ್ಟಾಚಾರದ ಆರೋಪ ಮಾಡಿಲ್ಲ" ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
"ಶಕ್ತಿ ಯೋಜನೆಯಿಂದ ಜನ ಖುಷಿಯಾಗಿದ್ದಾರೆ. 1 ಕೋಟಿ 28 ಲಕ್ಷ ಕುಟುಂಬಗಳಿಗೆ 2 ಸಾವಿರ ರೂ. ಕೊಡುವ ಅತೀ ದೊಡ್ಡ ಗೃಹ ಲಕ್ಷ್ಮೀ ಯೋಜನೆಗೆ ಬೆಳಗಾವಿಯಲ್ಲಿ ಚಾಲನೆ ನೀಡಲಿದ್ದೇವೆ. ಇಲ್ಲಿನ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡುತ್ತೇವೆ. ದಿನಾಂಕ ಇನ್ನಷ್ಟೇ ಅಂತಿಮವಾಗಬೇಕಿದೆ. ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಿದ್ದೇವೆ. ಆದರೆ ಅವರಿಗೆ ಆರೋಗ್ಯ ಸಮಸ್ಯೆಯಿದೆ. ಬರುತ್ತಾರೋ ಇಲ್ಲವೋ, ನೋಡಬೇಕು" ಎಂದು ಇದೇ ವೇಳೆ ಸಿಎಂ ತಿಳಿಸಿದರು.
ಇದನ್ನೂ ಓದಿ: ನಾವು ಕಮಿಷನ್ ಹಿಂದೆ ಬಿದ್ದವರಲ್ಲ, ಕಮಿಷನ್ ಹಿಂದಿರುವ ಭ್ರಷ್ಟರ ಬೆನ್ನು ಬಿದ್ದಿದ್ದೇವೆ: ಸಿಎಂ ಸಿದ್ದರಾಮಯ್ಯ