ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದಾಗಿ ಬೊಮ್ಮಾಯಿ ಅವರು ಸ್ಪಷ್ಟವಾಗಿ ಭರವಸೆ ಕೊಟ್ಟಿದ್ದಾರೆ. ಆದರೆ, ವಿಳಂಬ ಆಗಲು ನಮ್ಮ ಸಮಾಜದ ಇಬ್ಬರೂ ಮೂವರು ಜನ ಕುತಂತ್ರ ಮಾಡ್ತಿದ್ದಾರೆ. ಅವರ ಮಾತು ಕೇಳಿದರೂ ನೀವೂ ಹಾಳಾಗ್ತೀರಿ ಅಂತಾ ಸಿಎಂಗೆ ಸಲಹೆ ನೀಡಿದ್ದೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಂಬಂಧ ಈಗಾಗಲೇ ಬೊಮ್ಮಾಯಿ ಅವರ ಗಮನಕ್ಕೆ ತರಲಾಗಿದ್ದು, ಅವರು ಮೀಸಲಾತಿ ಕೊಡ್ತೀವಿ ಅಂತಾ ಹೇಳಿದ್ದಾರೆ. ಸಿಎಂಗೆ ಅಂತಿಮ ಗಡುವು ಕೊಟ್ಟಿದ್ದೇವೆ. ಜಗದ್ಗುರುಗಳು ಕೂಡಲ ಸಂಗಮದಲ್ಲಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡ್ತಿದ್ದಾರೆ. ಇನ್ಮುಂದೆ ಡಿಸಿ ಕಚೇರಿ ಎದುರು ಸೇರಿ ಹಂತ ಹಂತವಾಗಿ ಮೀಸಲಾತಿ ನೀಡುವವರೆಗೂ ನಾವು ಹೋರಾಟ ಕೈಬಿಡುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಎಲ್‌ಒಸಿಯಲ್ಲಿ ಶಾರದಾ ದೇವಿ ದೇವಾಲಯದ ಪುನರುತ್ಥಾನ ಕೆಲಸ ಆರಂಭ: ಪಾಕ್ನಿಂದಲೂ ಸಹಕಾರ!
ಬೊಮ್ಮಾಯಿ ಅವರೇ ಮೀಸಲಾತಿ ನೀಡ್ತೀವಿ ಅಂತಾ ಸ್ಪಷ್ಟವಾಗಿ ಭರವಸೆ ಕೊಟ್ಟಿದ್ದಾರೆ. ಅದು ವಿಳಂಬ ಆಗಲು ನಮ್ಮ ಸಮಾಜದ ಇಬ್ಬರೂ ಮೂರು ಜನ ಕುತಂತ್ರ ಮಾಡ್ತಿದ್ದಾರೆ. ಅವರ ಮಾತು ಕೇಳಿದರೆ ನೀವೂ ಹಾಳಾಗ್ತೀರಿ ಅಂತಾ ಸಿಎಂಗೆ ಸಲಹೆ ನೀಡಿದ್ದೇನೆ. ಆ ಸಲಹೆ ಒಳ್ಳೆಯ ರೀತಿ ತಗೊಂಡರೆ ಅವರಿಗೆ ಒಳ್ಳೆಯದಾಗುತ್ತದೆ ಎಂದು ಪರೋಕ್ಷವಾಗಿ ಸಚಿವ ಮುರಗೇಶ್ ನಿರಾಣಿ, ಸಿ.ಸಿ.ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ಬೊಮ್ಮಾಯಿ ಮೀಸಲಾತಿ ಕೊಟ್ಟೇ ಕೊಡ್ತಾರೆಂಬ ವಿಶ್ವಾಸ ಇದೆ. ಅವರು ಕೊಟ್ಟರೇ ಸನ್ಮಾನ ಮಾಡ್ತೇವೆ, ಕೊಡದಿದ್ರೆ ಹೋರಾಟ ಮಾಡ್ತೀವಿ ಎಂದರು. ಕರ್ನಾಟಕದ ಲಿಂಗಾಯತರಲ್ಲಿ 70 ಪರ್ಸೆಂಟ್ ಪಂಚಮಸಾಲಿ ಸಮಾಜದವರು ಇದ್ದಾರೆ ಅಂತಾ ಪ್ರೂಫ್ ಸಿಕ್ಕಿದೆ. ಐಬಿಯಿಂದ ಪ್ರಧಾನಿ ನರೇಂದ್ರ ಮೋದಿ ಸ್ವತಃ ಮಾಹಿತಿ ಪಡೆದಿದ್ದಾರೆ. ಇದು ದೊಡ್ಡ ಸಮಾಜ ಇದಕ್ಕೆ ನ್ಯಾಯ ಕೊಡಬೇಕು ಅಂತಾ ಪ್ರಧಾನಿಯ ಮನಸ್ಸಲ್ಲಿದೆ ಎಂದು ಹೇಳಿದರು.
ಭರವಸೆ ಈಡೇರದಿದ್ದರೆ ತಕ್ಕ ಪಾಠ ಕಲಿಸೋದು ನನ್ನ ಕೈಯಲ್ಲಿ ಇಲ್ಲ. ಸಮಾಜದ ಬಗ್ಗೆ ಮೇಲಿನವರಿಗೆ ಗೊತ್ತಾಗುತ್ತದೆ. ಮೇಲಿನವರು 24 ಗಂಟೆ ರಾಜಕಾರಣ ಮಾಡ್ತಾರೆ. ಈ ರೀತಿ ಮಾಡದಿದ್ರೆ ಈ ಸಮಾಜ ನಮ್ಮ ಕೈಬಿಟ್ಟು ಹೋಗುತ್ತದೆ ಅಂತಾ ಅವರಿಗೆ ಗೊತ್ತಿದೆ. ಅದು ಅವರಿಗೆ ಸಿಗ್ನಲ್ ಹೋಗುತ್ತದೆ. ಅವರೇ ಅನ್ನು ಮಾಡ್ತಾರೆ ಎಂದು ತಿಳಿಸಿದರು.