ಬೆಳಗಾವಿ: ಸಾರಿಗೆ ನೌಕರರಿಗೆ ಶೇ. 8ರಷ್ಟು ಸಂಬಳ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. ಹಠ ಮಾಡದೇ ಮುಷ್ಕರ ಕೈ ಬಿಡಬೇಕು. ಮುಷ್ಕರ ಕೈ ಬಿಟ್ಟರೆ ಮಾತುಕತೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ವಾಹನ ಮಾಲೀಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಆರೋಪದ ಬಗ್ಗೆ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡದಂತೆ ಖಾಸಗಿ ಬಸ್ ಮಾಲೀಕರಿಗೆ ಮನವಿ ಮಾಡುತ್ತೇನೆ. ಸಾರಿಗೆ ನೌಕರರ 9 ಬೇಡಿಕೆ ಪೈಕಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಆದರೂ ಹಠಕ್ಕೆ ಬಿದ್ದು ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಆರ್ಥಿಕ ಪರಿಸ್ಥಿತಿ ಗೊತ್ತಿದ್ದರೂ ಸ್ವಾರ್ಥಕ್ಕಾಗಿ ಸಿಬ್ಬಂದಿಯಿಂದ ಮುಷ್ಕರ ನಡೆಯುತ್ತಿದೆ. ಈ ಮುಷ್ಕರ ಉದ್ದೇಶಪೂರ್ವಕವಾಗಿದೆ ಎಂದೆನಿಸುತ್ತಿದೆ. ಮುಷ್ಕರ ಕೈ ಬಿಡದಿದ್ರೆ ಇವತ್ತು, ನಾಳೆ ನೋಡಿಕೊಂಡು ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಹುಬ್ಬಳ್ಳಿ: ಸರ್ಕಾರಿ ಬಸ್ಗಳ ಜಾಗದಲ್ಲಿ ಖಾಸಗಿ ಬಸ್ಗಳು
3 ಲಕ್ಷ ಅಂತರದಿಂದ ಮಂಗಳಾ ಗೆಲುವು:
ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ 3 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಲಿದ್ದಾರೆ. ನಿನ್ನೆ ತಡರಾತ್ರಿವರೆಗೆ ಎಲ್ಲ ಸಮಾಜದ ಮುಖಂಡರ ಜತೆ ಸಭೆ ನಡೆಸಿದ್ದೇನೆ. ಶಾಸಕರು ಹಾಗೂ ನಮ್ಮ ಮುಖಂಡರ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ನಮ್ಮ ಅಭ್ಯರ್ಥಿ 3 ಲಕ್ಷ ಮತಗಳ ಅಂತರದ ಗೆಲುವು ದಾಖಲಿಸಲಿದ್ದಾರೆ. ಸುರೇಶ ಅಂಗಡಿ ಅವರು ಈ ಹಿಂದೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ಮಂಗಳಾ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.