ಬೆಳಗಾವಿ: ರೈಲಿನಲ್ಲಿ ಆಕ್ಟೀವ್ ಆಗಿದ್ದ ಚಾಕೊಲೇಟ್ ಗ್ಯಾಂಗ್ ಅನ್ನು ಹೆಡೆಮುರಿ ಕಟ್ಟುವಲ್ಲಿ ಗೋವಾದ ಆರ್ ಪಿ ಎಫ್ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನನಿತ್ಯ ಗೋವಾ-ಬೆಳಗಾವಿ ಮಾರ್ಗವಾಗಿ ಸಂಚರಿಸುವ ರೈಲಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ಪ್ರಯಾಣಿಕರ ಜೊತೆಗೆ ಸಲುಗೆ ಬೆಳಸಿ ದರೋಡೆ ಮಾಡ್ತಿದ್ದ ಗ್ಯಾಂಗ್ ಗೋವಾ ಮತ್ತು ಕರ್ನಾಟಕ ರೈಲ್ವೆ ಪೊಲೀಸರಿಗೆ ದೊಡ್ಡ ತಲೆ ನೋವಾಗಿದ್ದರು. ಕಳೆದ 20 ದಿನಗಳ ಹಿಂದೆ ಗೋವಾ-ಬೆಳಗಾವಿ ಮಾರ್ಗದಲ್ಲಿ ಮಧ್ಯಪ್ರದೇಶ ಮೂಲದ ಎಂಟು ಜನ ಪ್ರಯಾಣಿಕರಿಗೆ ತಮ್ಮ ಕೈಚಳಕ ತೋರಿ ಮತ್ತು ಬರುವ ಚಾಕೊಲೇಟ್ ನೀಡಿ ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದರು.
ಬಳಿಕ ಅಸ್ವಸ್ಥರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 8 ಜನರು ಪ್ರಾಣಾಪಾಯದಿಂದ ಪಾರಾಗಿ ಸುರಕ್ಷಿತವಾಗಿ ತಮ್ಮೂರಿಗೆ ಮರಳಿದ್ದರು. ಈ ಸಂಬಂಧ ಗೋವಾ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗೋವಾ ಆರ್‌ಪಿಎಫ್ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಸರ್ತಾಜ್(29), ಚಂದನ್ ಕುಮಾರ್(23), ದಾರಾಕುಮಾರ್ (29) ಬಂಧಿತ ಆರೋಪಿಗಳು. ಬಂಧಿತರಿಂದ ಚಾಕೊಲೇಟ್ನಲ್ಲಿ ಡ್ರಗ್ಸ್ ಮತ್ತು ನಿದ್ದೆ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ.
ಡ್ರಗ್ಸ್ ಮತ್ತು ನಿದ್ದೆ ಮಾತ್ರೆ ಪುಡಿ ಮಾಡಿ ಸೇರಿಸಿ ರೈಲಿನಲ್ಲಿ ಪ್ರಯಾಣಿಕರಿಗೆ ನೀಡುತ್ತಿದ್ದರು. ಅದೇ ಮಾದರಿಯ ಮದ್ದಿಲ್ಲದ, ಅಸಲಿ ಚಾಕೊಲೇಟ್ ತಾವು ತಿನ್ನುತ್ತಿದ್ದರು. ಮತ್ತು ಬರುವ ಚಾಕೊಲೇಟ್ ತಿನ್ನುತ್ತಿದ್ದಂತೆ ಪ್ರಯಾಣಿಕರು ಮೂರ್ಛೆ ಹೋಗ್ತಿದ್ದರು. ಆಗ ತಕ್ಷಣ ಈ ಗ್ಯಾಂಗ್ ಅವರ ಬಳಿ ಇದ್ದ ಹಣ, ಮೊಬೈಲ್, ಒಡವೆಗಳನ್ನು ದೋಚಿ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದರು.
ರೈಲಿನಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದರಿಂದ ಪ್ರಯಾಣಿಕರು ಆತಂಕ್ಕೊಳಗಾಗಿದ್ದರು. ಈಗ ಚಾಕೊಲೇಟ್ ಗ್ಯಾಂಗ್ ವಶಕ್ಕೆ ಪಡೆಯಲಾಗಿದೆ. ಈ ಗ್ಯಾಂಗ್ನೊಂದಿಗೆ ಶಾಮೀಲಾಗಿರುವ ಇತರ ಆರೋಪಿಗಳನ್ನು ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರತ್ಯೇಕ ಪ್ರಕರಣ- ಕ್ಷುಲ್ಲಕ ಕಾರಣಕ್ಕೆ ಬಾಲಕನ ಕೊಲೆ: ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳ ಗುಂಪು ಬಾಲಕನೋರ್ವನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮಲ್ಲಾಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮಲ್ಲಾಪೂರ ಗ್ರಾಮದ ಪ್ರಜ್ವಲ್ ಸುಂಕದ (16) ಮೃತ ಬಾಲಕ ಎಂದು ಗುರುತಿಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಬಾಲಕರ ನಡುವೆ ಶುರುವಾದ ಜಗಳ ಓರ್ವ ಬಾಲಕನ ಕೊಲೆಯಲ್ಲಿ ಅಂತ್ಯವಾಗಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ಭೀಕರ ಕೊಲೆ: ಬೆಳಗಾವಿ-ಹುಬ್ಬಳ್ಳಿಯಲ್ಲಿ ಪ್ರತ್ಯೇಕ ಘಟನೆ