ಬೆಳಗಾವಿ : ಸಂಕ್ರಾತಿ ನಂತರ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ. ಜನವರಿ 14ರವರೆಗೆ ಸಂಪುಟ ವಿಸ್ತರಣೆ ಬೇಡ ಎನ್ನಿಸುತ್ತದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅಸ್ಸೋಂ ಪ್ರವಾಸದ ವೇಳೆ ಭೂಪೇಂದರ್ ಯಾದವ್ ಭೇಟಿ ಆಕಸ್ಮಿಕ. ಈ ವೇಳೆ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಕಾಮಕ್ಯದೇವಿ ದೇವಸ್ಥಾನ ಭಾರತದಲ್ಲಿ ಇತಿಹಾಸ ಪ್ರಸಿದ್ಧವಾಗಿದೆ. ಹೀಗಾಗಿ ಎಲ್ಲರೂ ಸೇರಿ ದರ್ಶನ ಪಡೆದಿದ್ದೇವೆ.
ಸಚಿವ ಸಂಪುಟ ವಿಸ್ತರಣೆ ನಾಳೆಯೇ ಮಾಡಬೇಕು ಎಂಬ ಆಗ್ರಹ ನಮ್ಮದೂ ಇದೆ. ಆದರೆ, ನಮ್ಮ ದೇಶ ಧಾರ್ಮಿಕ ನಂಬಿಕೆ ಮೇಲೆ ನಡೆಯುತ್ತ ಬಂದಿದೆ. ಹಾಗಾಗಿ ಜನವರಿ 14ರವರೆಗೆ ಸಂಪುಟ ವಿಸ್ತರಣೆ ಬೇಡ ಎಂಬ ಉದ್ದೇಶ ಇದೆ ಎಂದರು.
ಓದಿ:ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್.. ದಾದಾ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರಿಂದ ಮಾಹಿತಿ
ಇನ್ನು, ಗ್ರಾಪಂ ಚುನಾವಣೆ ಫಲಿತಾಂಶ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರ ಜಯಭೇರಿ ಎಂಬ ಲಿಂಕ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಜಾರಕಿಹೊಳಿ, ಪಿಆರ್‌ಒ ಮೂಲಕ ಪೋಸ್ಟ್ ಮಾಡಿಸುತ್ತಿದ್ದಾರೆ. ಹೆಬ್ಬಾಳ್ಕರ್ ಬೆಂಬಲಿಗರು ಒಂದೇ ಪಂಚಾಯತ್‌ನಲ್ಲಿ ಗೆದ್ದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಏನ್ ಬೇಕಾದ್ದನ್ನು ಬರೆದುಕೊಳ್ಳಬಹುದು. ಶೀಘ್ರದಲ್ಲಿ ಬೆಳಗಾವಿ ಧರ್ಮನಾಥ್ ಭವನದಲ್ಲಿ ಗೆದ್ದ ಸದಸ್ಯರೊಂದಿಗೆ ಸಭೆ ಮಾಡುತ್ತೇನೆ ಎನ್ನುವ ಮೂಲಕ ಶಕ್ತಿ ಪ್ರದರ್ಶನದ ಸುಳಿವು ನೀಡಿದರು.
ಆದಷ್ಟು ಬೇಗ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರನ್ನು ಹಾಜರುಪಡಿಸುತ್ತೇನೆ. ಹೈಜಾಕ್ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಗಾಡ್ ಫಾದರ್ ಇಬ್ಬರು ಪ್ರಚಾರ ಪ್ರಿಯರು ಎಂದು ಡಿಕೆಶಿಗೆ ಮಾತಿನ ಮೂಲಕ ಪರೋಕ್ಷವಾಗಿ ಕುಟುಕಿದ್ದಾರೆ.