ಬೆಳಗಾವಿ : ಎಂಇಎಸ್ ಸಂಘಟನೆ ಜೊತೆ ಬಿಜೆಪಿ ಆಂತರಿಕ ಒಪ್ಪಂದ ಮಾಡಿಕೊಂಡಿದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಆರೋಪ ಮಾಡಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಂಇಎಸ್‌ನ ತಂತ್ರಗಳೆಲ್ಲಾ ಬಿಜೆಪಿಯವರಿಗೆ ಗೊತ್ತಿದೆ. ಇವರು ಏನಾದರೂ ರಾಜಕೀಯ ಮಾಡ್ಕೊಳ್ಳಲಿ. ಆದರೆ, ಕನ್ನಡಿಗರಿಗೆ ದ್ರೋಹ ಮಾಡಿದವರ ರಕ್ಷಣೆ ಮಾಡಬಾರದು ಎಂದು ಒತ್ತಾಯಿಸಿದರು.
ಎಂಇಎಸ್ ಪುಂಡಾಟಿಕೆಗೆ ನಾನು ತೀವ್ರವಾಗಿ ಖಂಡಿಸುತ್ತೇನೆ. ಶಾಂತಿ ಸೌಹಾರ್ದತೆ ಎಲ್ಲೆಡೆ ನೆಲೆಸಿರಬೇಕು ಎನ್ನುವುದು ಗಡಿಪ್ರದೇಶದಲ್ಲಿರುವ ಕನ್ನಡಿಗರ ಆಶಯ. ಇದರಿಂದಲೇ ಎಂಇಎಸ್‌ನವರಿಗೆ ರಾಜ್ಯದಲ್ಲಿ ಎಲ್ಲಾ ರೀತಿಯ ಸವಲತ್ತುಗಳು, ಸಹಾನುಭೂತಿ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಶೇಕಡ 95ರಷ್ಟು ಸೌಹಾರ್ದತೆ ಇಲ್ಲಿ ನೆಲೆಗೊಂಡಿದೆ. ಕೆಲವೊಮ್ಮೆ ತಮ್ಮ ಅಸ್ತಿತ್ವವನ್ನು ತೋರಿಸಲು ಉತ್ತಮ ಕೆಲಸ ಮಾಡುವ ಬದಲು ಪುಂಡಾಟಿಕೆ ಮಾಡುವುದು ಜಾಸ್ತಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಹಾವನ್ನೇ ಹಗ್ಗವಾಗಿಸಿಕೊಂಡು ಸ್ಕಿಪ್ಪಿಂಗ್ ಮಾಡಿದ ಯುವಕ.. ವಿಡಿಯೋ ವೈರಲ್
ಈ ರೀತಿ ಕಿಡಿಗೇಡಿ ಕೃತ್ಯ ನಡೆಸುವವರನ್ನ ಹುಡುಕಿ ಶಿಕ್ಷೆಗೆ ಒಳಪಡಿಸಬೇಕು. ಈ ಮೂಲಕ ಮರಾಠಿಗರು ಹಾಗೂ ಕನ್ನಡಿಗರು ಸೌಹಾರ್ದಯುತವಾಗಿ ಬಾಳುವೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.