ಬೆಳಗಾವಿ: ಎರಡನೇ ಅಲೆ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಮೇ 10 ರಿಂದ 24 ರವರೆಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಪಾಲಿಸಬೇಕು. ಅನಗತ್ಯವಾಗಿ ಓಡಾಡುವ ಜನರಿಗೆ ಶಿಕ್ಷೆ ವಿಧಿಸುವ ಜತೆಗೆ ದಂಡ ಹಾಕಲಾಗುತ್ತದೆ ಎಂದು ಮಹಾನಗರ ಪೊಲೀಸ್ ಆಯುಕ್ತ ಡಾ. ಕೆ. ತ್ಯಾಗರಾಜನ್ ಜನರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ವೀಡಿಯೋ ಬಿಡುಗಡೆ ಮಾಡಿರುವ ಪೊಲೀಸ್ ಆಯುಕ್ತರು, ಕೋವಿಡ್ ಸೋಂಕು ತಡೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಸಂಪೂರ್ಣ ಲಾಕ್ಡೌನ್ಗೆ ಜನರು ಸಹಕರಿಸಬೇಕು. ಸಾರ್ವಜನಿಕರಿಗೆ ಅಗತ್ಯ ವಸ್ತುಗಳಿಗೆ ನಿತ್ಯ ಬೆಳಗ್ಗೆ 6 ರಿಂದ 10ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಈ ವೇಳೆ ಯಾರೂ ಕೂಡ ವಾಹನ ಉಪಯೋಗಿಸಿ ಮಾರುಕಟ್ಟೆಗೆ ಬರುವಂತಿಲ್ಲ. ಇನ್ನೂ ತಳ್ಳು ಗಾಡಿಯಲ್ಲಿ ತರಕಾರಿ, ಹಣ್ಣು ಮಾರಲು ಅವಕಾಶ ನೀಡಲಾಗಿದೆ. ಅಲ್ಲಿಂದಲೇ ಖರೀದಿಸಬಹುದು.
ಇದನ್ನೂ ಓದಿ: ಕೋವಿಡ್ ಭೀತಿ ಮರೆತು ಗುಂಪು ಗುಂಪಾಗಿ ಫಿಶ್ ಖರೀದಿಸಿದ ಜನ
ವಾಸ ಸ್ಥಳದ ಸಮೀಪದಲ್ಲಿಯೇ ಖರೀದಿಸಬೇಕು. ಬೆಳಗ್ಗೆ 10 ಗಂಟೆ ನಂತರ ಹೊರಗಡೆ ಬರಲು ಅವಕಾಶವಿಲ್ಲ. ಆದರೆ, ಆ್ಯಂಬುಲೆನ್ಸ್, ತುರ್ತು ವಾಹನಗಳಿಗೆ ನಿಯಮಗಳನ್ನು ಅನುಸರಿಸಿ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಒಂದು ವೇಳೆ ಏರ್ ಪೋರ್ಟ್, ರೈಲ್ವೆ ನಿಲ್ದಾಣಕ್ಕೆ ಹೋಗುವವರು ಮುಂಚಿತವಾಗಿ ಟಿಕೆಟ್ ಬುಕ್ ಮಾಡಿದ್ದರೆ ಅಂತವರಿಗೂ ನಿಯಮಗಳಡಿ ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.