ಬೆಳಗಾವಿ:ಖಾನಾಪುರ ತಾಲೂಕಿನ ಆಮಟೆ ಗ್ರಾಮದ ವ್ಯಕ್ತಿ ಮೇಲೆ ಕರಡಿ ದಾಳಿ ನಡೆಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಆಮಟೆ ಗ್ರಾಮದ ತಾನಾಜಿ ನಾಯ್ಕ್ (35) ಕರಡಿ ದಾಳಿಯಿಂದ ಮೃತಪಟ್ಟಿಲ್ಲ, ಆತ ಬಂದೂಕಿನಿಂದ ಮೃತಪಟ್ಟಿದ್ದಾನೆ. ಈ ಹಿನ್ನೆಲೆ ಖಾನಾಪುರ ಠಾಣೆಯ ಪೊಲೀಸರು ಐವರನ್ನು ಬಂಧಿಸಿದ್ದಾರೆ.ಆಮಟೆ ಗ್ರಾಮದ ದೇವಿದಾಸ್ ಗಾಂವ್ಕರ್ (28), ಸಂತೋಷ ಗಾಂವ್ಕರ್ (32), ವಿಠ್ಠಲ ನಾಯಕ (40) ರಾಮಾ ನಾಯಕ (21) ಹಾಗೂ ಜಾಂಬೋಟಿಯ ಪ್ರಶಾಂತ ಸುತಾರ್ (28) ಬಂಧಿತರು.
ಮಾರ್ಚ್ 11 ರಂದು ತಾನಾಜಿ ದನಗಳಿಗೆ ನೀರು ಕುಡಿಸಲು ಮಲಪ್ರಭಾ ನದಿ ತೀರಕ್ಕೆ ಹೋಗಿದ್ದರು. ಆಗ ಆತನ ಮೇಲೆ ಬಂದೂಕಿನಿಂದ ದಾಳಿ ನಡೆಸಲಾಗಿದೆ. ಬಳಿಕ ಸಾಕ್ಷ್ಯ ಮುಚ್ಚಿ ಹಾಕಲು ಮೈಮೇಲೆ ಗಾಯ ಮಾಡಿ, ಕರಡಿ ದಾಳಿ ಎಂದು ಬಿಂಬಿಸಲಾಗಿತ್ತು. ಮೃತನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪತ್ನಿ ತೇಜಸ್ವಿನಿ ಖಾನಾಪುರ ಠಾಣೆಯಲ್ಲಿ ದೂರು ನೀಡಿದ್ದರು. ಮರಣೋತ್ತರ ಪರೀಕ್ಷೆ ವೇಳೆ ಕರಡಿ ದಾಳಿಯಲ್ಲ, ಗುಂಡು ತಗುಲಿ ಮೃತಪಟ್ಟಿರುವುದು ದೃಢಪಟ್ಟಿದೆ. ಪತ್ನಿ ದೂರು ಆಧರಿಸಿ ಆರೋಪಿಗಳನ್ನು ಖಾನಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.