ಗೋಕಾಕ(ಬೆಳಗಾವಿ): ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರು ಗೆಲ್ಲುವ ವಿಶ್ವಾಸವಿದೆ. ಅರಭಾವಿ ಕ್ಷೇತ್ರದ ಜನರಲ್ಲಿ ಗೊಂದಲ ನಿವಾರಣೆ ಮಾಡಿದ್ದು ಹೆಚ್ಚಿನ ಮತಗಳ ಅಂತರದಿಂದ ಮಂಗಳಾ ಅಂಗಡಿ ಗೆಲುವು ಸಾಧಿಸಲಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಜಿಲ್ಲೆಯ ಗೋಕಾಕ ಪಟ್ಟಣದ ಸರ್ಕಾರಿ ಶಾಲೆ 3ರಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರಿಗೆ ಎಸ್ಐಟಿ ನೋಟಿಸ್ ವಿಚಾರವಾಗಿ ಪ್ರತಿಕ್ರಿಯಿಸಿದರು. ನೋಟಿಸ್ ನೀಡಿದ್ದು ನಿಜ, ನಾನೇ ನೋಟಿಸ್ ಪಡೆದಿದ್ದೇನೆ. ಹೋಮ್ ಕ್ವಾರಂಟೈನ್ ಇರುವುದರಿಂದ ನಾನೇ ಪಡೆದಿದ್ದೇನೆ. ಹೋಂ ಐಸೋಲೇಷನ್ ಏಪ್ರಿಲ್ 20ರಂದು ಮುಗಿಯಲಿದೆ. ಬಳಿಕ ಮತ್ತೊಮ್ಮೆ ಕೋವಿಡ್ ಪರೀಕ್ಷೆ ನಡೆಸಿ ನೆಗೆಟಿವ್ ಬಂದರೆ ಖಂಡಿತಾ 20ರಂದು ರಮೇಶ್ ಜಾರಕಿಹೊಳಿ ಎಸ್ಐಟಿ ವಿಚಾರಣೆಗೆ ಹಾಜರಾಗುತ್ತಾರೆ ಎಂದು ಹೇಳಿದರು.
ಪಿಪಿಇ ಕಿಟ್ ಧರಿಸಿ ಮತದಾನ ಮಾಡಿದ ರಮೇಶ್ ಜಾರಕಿಹೊಳಿ ಪುತ್ರ
ಕೊರೊನಾ ಪಾಸಿಟಿವ್ ಇರುವ ಕಾರಣ ಪಿಪಿಇ ಕಿಟ್ ಧರಿಸಿ ಬಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ ಜಾರಕಿಹೊಳಿ ಮತದಾನ ಮಾಡಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಹಿರಿಯ ಪುತ್ರ ಅಮರನಾಥ, ಗೋಕಾಕ ನಗರದ ನ್ಯೂ ಇಂಗ್ಲಿಷ್ ಸ್ಕೂಲ್ನ ಮತಗಟ್ಟೆ ಸಂಖ್ಯೆ 165ರಲ್ಲಿ ಮತದಾನ ಮಾಡಿದರು. ಕೊರೊನಾ ಪಾಸಿಟಿವ್ ಇರುವ ಕಾರಣ ಗೋಕಾಕ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ಅಮರನಾಥ ಆ್ಯಂಬುಲೆನ್ಸ್ ಮೂಲಕ ಬಂದು ಮತದಾನ ಮಾಡಿದರು.