ಅಥಣಿ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ವಕ್ಷೇತ್ರವಾದ ಅಥಣಿ ತಾಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬರದೆ ವಿದ್ಯಾರ್ಥಿಗಳು ಪರದಾಡಿದ ಘಟನೆ ನಡೆದಿದೆ.
ಅಥಣಿ-ಕಲಮಡಿ ಮಾರ್ಗವಾಗಿ ಸಂಚರಿಸುವ ಬಸ್ ಸರಿಯಾದ ಸಮಯಕ್ಕೆ ಬರದೆ ರಾಮತೀರ್ಥ ಗ್ರಾಮದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತಂಕದಲ್ಲಿ ಸಮಯ ಕಳೆಯುವಂತೆ ಮಾಡಿತು. ತಾಲೂಕಿನ ರಾಮತೀರ್ಥ ಗ್ರಾಮದ ವಿದ್ಯಾರ್ಥಿಗಳು ಕಕಮರಿ ಗ್ರಾಮದ ಪ್ರೌಢಶಾಲೆಗೆ ವಿದ್ಯಾಭ್ಯಾಸ ಮಾಡಲು ದಿನನಿತ್ಯ 7 ಕಿ.ಮೀ ದೂರ ಸಂಚಾರ ಮಾಡುತ್ತಾರೆ. ಪ್ರತಿದಿನ ಸಂಜೆ 5 ಗಂಟೆಗೆ ಬಸ್ ಬರುತ್ತಿತ್ತು. ಆದರೆ ಕಳೆದೊಂದು ವಾರದಿಂದ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ನಾವು ರಾಮತೀರ್ಥ ಗ್ರಾಮದಿಂದ ಕಕಮರಿ ಗ್ರಾಮಕ್ಕೆ ಶಾಲೆಗೆ ಬರುತ್ತೇವೆ. ನಮ್ಮ ಊರಿನಿಂದ ಹಾಗೂ ಮುರಳಿ ಶಾಲೆಯಿಂದ ಮನೆಗೆ ಹೋಗಬೇಕಾದರೆ ಸರಿಯಾದ ಸಮಯದಲ್ಲಿ ಬಸ್ ಬರುವುದಿಲ್ಲ. ಇದು ನಮಗೆ ಹಾಗೂ ನಮ್ಮ ಪಾಲಕರಿಗೆ ಆತಂಕಕ್ಕೆ ಕಾರಣವಾಗಿದೆ. ಗ್ರಾಮದಿಂದ ನಮ್ಮ ಮನೆ ದೂರ ಇರುವುದರಿಂದ ಕತ್ತಲೆಯಲ್ಲಿ ನಾವು ನಡೆದುಕೊಂಡು ಹೊಗುವಾಗ ತುಂಬಾ ಹೆದರಿಕೆ ಆಗುತ್ತದೆ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಬಸ್ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.
ಬಸ್ ವಿಳಂಬಕ್ಕೆ ಕಾರಣ:
ಸ್ಥಳೀಯರ ಮಾಹಿತಿ ಪ್ರಕಾರ ಪ್ರಮುಖವಾಗಿ ಈ ಭಾಗದಲ್ಲಿನ ರಸ್ತೆಗಳು ಸರಿಯಿಲ್ಲ. ಅಷ್ಟೇ ಅಲ್ಲದೆ ಬಸ್ ಕೂಡ ರಿಪೇರಿಲ್ಲಿದೆ. ಎಲ್ಲಿ ಬೇಕಾದರೂ ಕೆಟ್ಟು ನಿಲ್ಲುತ್ತದೆ. ಇದರಿಂದ ಈ ಸಮಸ್ಯೆ ಎದುರಾಗಿದೆ ಎಂದು ಮಾಹಿತಿ ನೀಡಿದರು.