ಗೋಕಾಕ: ಉಪ ಚುನಾವಣೆಯಿಂದ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದ್ದು, ಗೋಕಾಕ್ನ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರ ಮನವೊಲಿಸುವ ಕಸರತ್ತು ಜೋರಾಗಿ ನಡೆಯಿತು.
ಅಶೋಕ ಪೂಜಾರಿ ಅವರ ಮನವೊಲಿಸಲು ಮುಂದಾದ ಬಿಜೆಪಿಯ ಸ್ಥಳೀಯ ನಾಯಕರಾದ ಡಾ. ವಿಶ್ವನಾಥ್ ಪಾಟೀಲ, ಮಹಾಂತೇಶ ತಾಂವಶಿ, ಶಾಮಾನಂದ ಪೂಜಾರಿ ಸೇರಿದಂತೆ ಕೆಲವರು ಅಶೋಕ ಪೂಜಾರಿ ಅವರ ಜ್ಞಾನ ಮಂದಿರಕ್ಕೆ ಭೇಟಿ ನೀಡಿ ಅವರ ಮನವೊಲಿಕೆಗೆ ಯತ್ನ ನಡೆಸಿದರು.
ಇದರ ಬೆನ್ನಲ್ಲೇ ಅಶೋಕ ಪೂಜಾರಿ ಬೆಂಬಲಿಗರು ಬಿಜೆಪಿ ನಾಯಕರ ಹಿಂದೆ ನೀವು ಹೋಗುವುದಾದರೆ ನಮಗೆ ವಿಷ ಉಣಿಸಿ ಅಥವಾ ಬಾವಿಗೆ ತಳ್ಳಿ ಹೋಗಿ ಎಂದು ಪ್ರತಿಭಟನೆ ನಡೆಸಿದ್ದಾರೆ.
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಕೂಡಾ ಅಶೋಕ ಪೂಜಾರಿ ತಂಗಿರುವ ಜ್ಞಾನ ಮಂದಿರಕ್ಕೆ ಭೇಟಿ ನೀಡಿ ಬಿಜೆಪಿಗಾಗಿ ನಾಮಪತ್ರ ಹಿಂಪಡೆಯಬೇಕು ಎಂದು ವಿನಂತಿಸಿದರು. ಆದರೆ ಅಶೋಕ ಪೂಜಾರಿ ಅವರ ಕೆಲ ಬೆಂಬಲಿಗರು ಮಹಾಂತೇಶ ಕವಟಗಿಮಠ ಮುಂದೆ ಭ್ರಷ್ಟ ವ್ಯವಸ್ಥೆಗೆ ಧಿಕ್ಕಾರ ಎಂದು ಕೂಗಿದ ಘಟನೆ ನಡೆಯಿತು. ಬಂದ ದಾರಿಗೆ ಸುಂಕವಿಲ್ಲ ಎಂದು ಮಹಾಂತೇಶ ಕವಟಗಿಮಠ ವಾಪಸಾದರು.