ಬೆಳಗಾವಿ: ಕಳೆದ ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ ನವವಿವಾಹಿತೆ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮಹಿಳೆ ಸಾವಿಗೆ ವರದಕ್ಷಿಣೆ ಕಿರುಕುಳ ಮತ್ತು ಗಂಡನ ಅಕ್ರಮ ಸಂಬಂಧವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಕಳೆದ ಸೆ.14ರಂದು ಬೆಳಗಾವಿ ನಗರದ ಖಂಜರ್ ಗಲ್ಲಿಯ ನಿವಾಸಿ ಮುಸ್ಕಾನ್ ಕಗ್ಜಿ (23) ಎಂಬುವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಡ ಕುಟುಂಬದಲ್ಲಿ ಜನಿಸಿದ ಮುಸ್ಕಾನ್, ಚಿಕ್ಕವಯಸ್ಸಿನಲ್ಲೇ ತಂದೆ ಕಳೆದುಕೊಂಡಿದ್ದರು. ಮನೆಯ ಜವಾಬ್ದಾರಿ ಹೊತ್ತ ತಾಯಿ ಮುಸ್ಕಾನ್ ನನ್ನು ಬೆಳಗಾವಿಯ ಶಹಾಪುರದ ಅಳವಣ ಗಲ್ಲಿಯ ನಿವಾಸಿಯಾಗಿದ್ದ ರೋಹಿಮ್ ಕಾಗ್ಜಿ ಎಂಬಾತನಿಗೆ ಕಳೆದ ಎಂಟು ತಿಂಗಳ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಮುಸ್ಕಾನ್ ದೂರದ ಸಂಬಂಧಿ ಹಸೀನಾ ಎಂಬ ಮಹಿಳೆ ಮುಂದೆ ನಿಂತು ಮದುವೆ ಮಾಡಿಸಿದ್ದರು.
ಆತ್ಮಹತ್ಯೆಗೆ ಕಾರಣ ಏನು?
ಮೃತ ಯುವತಿ ಸಂಬಂಧಿಕರ ಪ್ರಕಾರ, ಹಸೀನಾಗೂ ಹಾಗೂ ರೋಹಿಮ್‌ಗೂ ಅನೈತಿಕ ಸಂಬಂಧವಿತ್ತಂತೆ. ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಪಕ್ಕಾ ಪ್ಲಾನ್ ಮಾಡಿದ ಹಸೀನಾ, ತನ್ನ ಪ್ರಿಯಕರ ರೋಹಿಮ್ ಜೊತೆ ಮುಸ್ಕಾನ್ ವಿವಾಹ ಮಾಡಿಸಿದ್ದಾಳೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮದುವೆಯಾದ ಒಂದು ತಿಂಗಳ ಬಳಿಕ ಮುಸ್ಕಾನ್‌ಗೆ ಮನೆಯಿಂದ ಹಣ ತಗೆದುಕೊಂಡು ಬರುವಂತೆ ರೋಹಿಮ್ ನಿತ್ಯ ಪೀಡಿಸುತ್ತಿದ್ದನಂತೆ. ಅಷ್ಟೇ ಅಲ್ಲದೆ, ಗಾಂಜಾ ಸೇವನೆ ಸೇರಿದಂತೆ ಕೆಟ್ಟ ಚಟಗಳ ದಾಸನಾಗಿದ್ದ ರೋಹಿಮ್, ಹಸೀನಾ ಜೊತೆ ಅಕ್ರಮ ಸಂಬಂಧ ಮುಂದುವರಿಸಿದ್ದಾನೆ. ಇದರಿಂದ ಬೇಸತ್ತು ಮುಸ್ಕಾನ್ ಸೆ.14ರ ಸಂಜೆ ಗಂಡನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಮುಸ್ಕಾನ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಮುಸ್ಕಾನ್ ಪತಿ ರೋಹಿಮ್ ಕಾಗ್ಜಿ, ಮಾವ ಇಮ್ತಿಯಾಜ್ ಕಾಗ್ಜಿ, ಅತ್ತೆ ಹಲಿಮಾ ಕಾಗ್ಜಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ಪತಿ ರೋಹಿಮ್ ನನ್ನು ಶಹಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಅಕ್ರಮ ಸಂಬಂಧ ಆರೋಪದ ಹಿನ್ನೆಲೆ ಹಸೀನಾಳನ್ನು ಬಂಧಿಸುವಂತೆ ಮುಸ್ಕಾನ್ ಕುಟುಂಬಸ್ಥರು ಆಗ್ರಹಿಸಿದ್ದಾರೆ.