ಬೆಳಗಾವಿ: ಚಂದನವನದ ಪ್ರೇಮಕವಿ ಹಾಗೂ ಗೀತ ರಚನೆಕಾರ ಕೆ. ಕಲ್ಯಾಣ್ ದಾಂಪತ್ಯ ಕಲಹಕ್ಕೆ ಕಾರಣ ಎನ್ನಲಾಗಿದ್ದ ಮಂತ್ರವಾದಿಯನ್ನು ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ.
ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬುಡಗಿ ಗ್ರಾಮದ ಶಿವಾನಂದ ವಾಲಿಯನ್ನು ತಡರಾತ್ರಿ ಬಂಧಿಸಿದ್ದಾರೆ. ದಾಂಪತ್ಯ ಕಲಹದ ಎರಡನೇ ಆರೋಪಿಯಾಗಿರುವ ಈತನನ್ನು ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಅ.17ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಪತ್ನಿ ಅಶ್ವಿನಿ ಅಪಹರಣ ಹಾಗೂ ಆಸ್ತಿ ವರ್ಗಾವಣೆ ಪ್ರಕರಣ ಸಂಬಂಧ ಕೆ.ಕಲ್ಯಾಣ್ ದೂರು ನೀಡಿದ್ದರು. ಈ ದೂರಿನಲ್ಲಿ ಶಿವಾನಂದ ವಾಲಿ ಎರಡನೇ ಆರೋಪಿಯಾಗಿದ್ದಾನೆ. ಪತ್ನಿ, ಅತ್ತೆ ಹಾಗೂ ಮಾವನನ್ನು ಪುಸಲಾಯಿಸಿ ಹಣ, ಆಸ್ತಿ ವರ್ಗಾವಣೆ ಮಾಡಿದ ಆರೋಪ ಶಿವಾನಂದ ವಾಲಿ ವಿರುದ್ಧ ಇದೆ. ಕೆ. ಕಲ್ಯಾಣ್ ಪತ್ನಿಯ ಬ್ಯಾಂಕ್ ಖಾತೆಯಿಂದ ಶಿವಾನಂದ ವಾಲಿ 45 ಲಕ್ಷ ರೂ. ಹಣ ವರ್ಗಾವಣೆ ಮಾಡಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎನ್ನಲಾಗ್ತಿದೆ.
ಶಿವಾನಂದ ವಾಲಿ ಹಲವು ವರ್ಷಗಳಿಂದ ಕೆ.ಕಲ್ಯಾಣ್ ಅವರ ಪತ್ನಿ ಅಶ್ವಿನಿ ಕುಟುಂಬಕ್ಕೆ ಆಪ್ತನಾಗಿದ್ದ. ಕೆ.ಕಲ್ಯಾಣ್ ಮನೆಕೆಲಸದಾಕೆ ಗಂಗಾ ಕುಲಕರ್ಣಿ ಮೂಲಕ ಈತ ಪರಿಚಯವಾಗಿದ್ದ. ಶಿವಾನಂದ ವಾಲಿ ಮಾಟ ಮಂತ್ರ ಮಾಡಿ ಕಲ್ಯಾಣ್ ಕುಟುಂಬಕ್ಕೆ ವಂಚಿಸಿರುವ ಆರೋಪ ಕೇಳಿಬಂದಿದೆ. ಪೊಲೀಸರು ಶಿವಾನಂದನನ್ನು ವಶಕ್ಕೆ ಪಡೆದ ವೇಳೆ ಮಾಟ ಮಂತ್ರದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಶಿವಾನಂದ ವಾಲಿ ಊದಿನಕಡ್ಡಿ ಶಿವಾನಂದ ಎಂದೇ ಫೇಮಸ್ ಆಗಿದ್ದ. ಮಾಟ ಮಂತ್ರದ ಮೂಲಕ ಹಲವರಿಗೆ ವಂಚಿಸಿರುವ ಆರೋಪವಿದೆ. ಪ್ರಕರಣದ ಮೊದಲ ಆರೋಪಿ ಗಂಗಾ ಕುಲಕರ್ಣಿಗೂ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.