ಚಿಕ್ಕೋಡಿ : ನಿಪ್ಪಾಣಿ ತಾಲೂಕಿನ ಜತ್ರಾಟ ಸಮೀಪದ ಗದ್ದೆಯಲ್ಲಿ ವಿವಾಹಿತ ಮಹಿಳೆಯನ್ನು ಕೊಂದು ಹೂತು ಹಾಕಿದ್ದ ಪ್ರಕರಣವನ್ನು ಮಹಾರಾಷ್ಟ್ರದ ಕಾಗಲ್ ಪೊಲೀಸರು ಬೇಧಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಕೊಲ್ಲಾಪುರ ಜಿಲ್ಲೆಯ ಕಾಗಲ‌್ ತಾಲೂಕಿನ ಗೋರಂಭೆ ಗ್ರಾಮದ ಗೀತಾ ಶಿರಗಾಂವೆ (34) ಕೊಲೆಯಾದ ಮಹಿಳೆ. 18 ವರ್ಷಗಳ ಹಿಂದೆ ಮದುವೆಯಾಗಿದ್ದ ಗೀತಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಕಳೆದ ಆರು ತಿಂಗಳ ಹಿಂದೆ ಗಂಡನ ಜತೆ ಜಗಳವಾಡಿ ತವರು ಮನೆಗೆ ಬಂದಿದ್ದರು. ನಂತರ ಗ್ರಾಮದ ಸಾಗರ ಎಂಬ ವಿವಾಹಿತನೊಂದಿಗೆ ಅನೈತಿಕ ಸಂಬಂಧ ಹೊಂದಿ ನರಸಿಂಹವಾಡಿಯಲ್ಲಿ ಮದುವೆಯಾಗಿ ಸಂಸಾರ ಶುರು ಮಾಡಿದ್ದಳು.
ಕೆಲ ದಿನಗಳ ನಂತರ ಗೀತಾ ಹಾಗೂ ಸಾಗರ ನಡುವೆ ಕಲಹ ಶುರುವಾಗಿದೆ. ಇದರಿಂದ ಬೇಸತ್ತ ಸಾಗರ, ಗೀತಾ ಕೊಲೆಗೆ ಸಂಚು ರೂಪಿಸಿ ಇಬ್ಬರು ಯುವಕರಿಗೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾನೆ. ಅಷ್ಟೇ ಅಲ್ಲ, ಸ್ವತಃ ತಾನೇ ಗೀತಾ ಕಾಣೆಯಾಗಿದ್ದಾಳೆ ಎಂದು ಕಾಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಕೊಲೆ ಮಾಡಿ ಗೀತಾಳ ಮೊಬೈಲ್ನೊಂದಿಗೆ ಪರಾರಿಯಾಗಿದ್ದ ಆರೋಪಿಗಳು ಅದನ್ನು ಎರಡು ತಿಂಗಳ ನಂತರ ಮೊಬೈಲ್ ಅಂಗಡಿಯವನಿಗೆ ಮಾರಿದ್ದಾರೆ. ನಂತರ ಮೊಬೈಲ್ ಮತ್ತೊಬ್ಬನ ಕೈ ಸೇರಿದಾಗ ಆತ ಮೊಬೈಲ್ ಆನ್ ಮಾಡಿದ್ದಾನೆ. ಇದಕ್ಕಾಗಿ ಕಾದು ಕುಳಿತಿದ್ದ ಪೊಲೀಸರು ಕೋಡ್ ಆಧಾರದ ಮೇಲೆ ಗ್ರಾಹಕನ ವಿಚಾರಣೆ ನಡೆಸಿ ನಿಪ್ಪಾಣಿಯ ಇಬ್ಬರು ಕೊಲೆ ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ.