ಬೆಳಗಾವಿ: ವಿಜಯನಗರ ಶಾಸಕ ಆನಂದ ಸಿಂಗ್ ರಾಜೀನಾಮೆ ಮೈತ್ರಿ ಸರ್ಕಾರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಆನಂದ್ ಸಿಂಗ್ ರಾಜೀನಾಮೆಯ ಬೆಳವಣಿಗೆ ಹಿನ್ನೆಲೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕೊಟ್ಟ ಮೇಲೆ ವಾಪಸ್ ಪಡೆಯಲು ಅವಕಾಶವಿದೆ. ನಮ್ಮ ವರಿಷ್ಠರು ಈ ಸಮಸ್ಯೆಯನ್ನು ಬಗೆಹರಿಸುತ್ತಾರೆ. ರಾಜೀನಾಮೆಯೊಂದೇ ಸಮಸ್ಯೆಗೆ ಪರಿಹಾರ ಅಲ್ಲ. ಆನಂದ ರಾಜೀನಾಮೆ ಸರ್ಕಾರಕ್ಕೆ ಯಾವುದೇ ಎಫೆಕ್ಟ್ ಆಗಲ್ಲ. ಈ ಹಿಂದೆಯೂ ಕೂಡ 10 ಜನ ಶಾಸಕರು ಮುಂಬೈ ರೆಸಾರ್ಟ್ಗೆ ಹೋಗಿ ಬಂದರೂ ಸರ್ಕಾರಕ್ಕೆ ಏನೂ ಮಾಡಲು ಆಗಿಲ್ಲವೆಂದು ಎಂದರು. ಜಿಂದಾಲ್ ಭೂ ವಿವಾದ ವಿಷಯಕ್ಕೆ ಸಂಬಂಧಿಸಿದಂತೆ ಆನಂದ್ ಸಿಂಗ್ ಶಾಸಕ ರಾಜೀನಾಮೆ ಕೊಟ್ಟಿರಬಹುದು. ಅತೃಪ್ತರ ಗುಂಪಿಗೂ ಆನಂದ್ ಸಿಂಗ್ ಗೆ ಯಾವುದೇ ಸಂಬಂಧ ಇಲ್ಲ. ಯಾರೇ ರಾಜೀನಾಮೆ ಕೊಟ್ಟರೂ ಮೈತ್ರಿ ಸರ್ಕಾರ ಅಲ್ಲಾಡಿಸಲು ಆಗಲ್ಲ ಎಂದ್ರು.
ಇನ್ನು ಶಾಸಕ ಆನಂದ್ ಸಿಂಗ್ ರಾಜೀನಾಮೆಗೂ ಸಿಎಂ ಅಮೆರಿಕ ಪ್ರವಾಸಕ್ಕೂ ಯಾವುದೇ ಸಂಬಂಧ ಇಲ್ಲ. ಏಳು ಜನ ಅತೃಪ್ತರು ಯಾರೂ ರಾಜೀನಾಮೆ ಕೊಡುವುದಿಲ್ಲ ಎಂದರು. ಬಿಜೆಪಿ ನಾಯಕರು ಮೈತ್ರಿ ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ರಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಆಪರೇಷನ್ ಕಮಲ ಮಾಡಿದ್ರೆ ನಾವು ರಿವರ್ಸ್ ಆಪರೇಷನ್ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ಎಚ್ಚರಿಕೆ ರವಾನಿಸಿದ್ದಾರೆ.
ಇನ್ನು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ರಾಜೀನಾಮೆ ಕೊಡ್ತಾರಾ ಎಂದು ಪ್ರಶ್ನಿಸುತ್ತಿದ್ದಂತೆ ಸಚಿವ ಸತೀಶ್ ಜಾರಕಿಹೊಳಿ ಅವರೇ ಮಹೇಶ್ ಕುಮಟಳ್ಳಿಗೆ ಖುದ್ದು ಕರೆ ಮಾಡಿದರು. ಆಗ ಮಹೇಶ ಕುಮಟಳ್ಳಿ, ನಾನು ಎಲ್ಲೂ ಹೋಗಿಲ್ಲ. ಬೆಂಗಳೂರಿನಲ್ಲೇ ಇದ್ದೇನೆ ಎಂದು ಸ್ಪಷ್ಟಪಡಿಸಿದರು. ಆಗ ಸಚಿವ ಸತೀಶ್ ನಿಮ್ಮ(ಪತ್ರಕರ್ತರ) ಏಳು ಜನ ಲಿಸ್ಟ್ನಲ್ಲಿದ್ದ ಓರ್ವ ಶಾಸಕರು ಕಮ್ಮಿ ಆದ್ರು ನೋಡಿ ಎಂದು ಹಾಸ್ಯ ಚಟಾಕಿ ಹಾರಿಸಿದ್ರು.