ಬೆಳಗಾವಿ: ಪಿತ್ರಾರ್ಜಿತ ಆಸ್ತಿ ಪರಭಾರೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ನೀಡಲು ಲಂಚ ಕೇಳಿದ್ದ ಸವದತ್ತಿ ತಾಲೂಕು ಮುರಗೋಡ ಸಬ್ ರಿಜಿಸ್ಟ್ರಾರ್ ಮತ್ತು ಲಂಚ ಸ್ವೀಕರಿಸಿದ ಬಾಂಡ್ ರೈಟರ್ ಇಬ್ಬರೂ ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಸಬ್ ರಿಜಿಸ್ಟ್ರಾರ್ ಸಂಜೀವ ವೀರಭದ್ರ ಕಪಾಲಿ ಹಾಗೂ ಸ್ಥಳೀಯ ಬಾಂಡ್ ರೈಟರ್ ಶಿವಯೋಗಿ ಶಂಕರಯ್ಯ ಮಲ್ಲಯ್ಯನವರ ಎಂಬಿಬ್ಬರನ್ನೂ ಎಸಿಬಿ ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದೆ.
ಮೊದಲ ಆರೋಪಿ ಸಂಜೀವ ಕಪಾಲಿ ದಾಖಲೆ ಪತ್ರಗಳನ್ನು ನೀಡಲು ವಿನಾಕಾರಣ ವಿಳಂಬ ಧೋರಣೆ ಅನುಸರಿಸುತ್ತಿದ್ದುದಲ್ಲದೆ, ಕೇಳಿದಾಗ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತಂತೆ ಶಿವಪ್ಪ ವರಗಣ್ಣವರ ಎಂಬವರು ಎಸಿಬಿಗೆ ದೂರು ನೀಡಿದ್ದರು.
ಈ ದೂರಿನ ಆಧಾರದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಲಂಚ ಪಡೆಯುವ ಸಂದರ್ಭದಲ್ಲಿ ಆರೋಪಿಗಳನ್ನು ಹಿಡಿದು ಬಂಧಿಸಿದ್ದಾರೆ.
ಇದನ್ನೂ ಓದಿ: ಅಂಕೋಲಾ: ಶಾಲೆಯ ಮೇಲ್ಛಾವಣಿ ಪ್ಲಾಸ್ಟರಿಂಗ್ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ