ಬೆಳಗಾವಿ/ಅಥಣಿ: ಕೊರೊನಾ ವೈರಸ್ ಹಿನ್ನೆಲೆ ಬಡವರು ಹಾಗೂ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರಿಂದ ಹಲವು ರಾಜಕೀಯ ನಾಯಕರು, ಸಂಘ-ಸಂಸ್ಥೆಗಳು ಬಡವರ, ರೈತರ ನೆರವಿಗೆ ಆಗಮಿಸಿವೆ. ಇದೇ ರೀತಿಯಲ್ಲಿ ಬೆಳಗಾವಿಯ ಅಥಣಿಯಲ್ಲಿ ಕಾಂಗ್ರೆಸ್ ಮುಖಂಡರು 10 ಟನ್ ತರಕಾರಿಯನ್ನು ಬಡ ಕುಟುಂಬಗಳಿಗೆ ವಿತರಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡಲಾಗಿದೆ. ಇದೇ ವೇಳೆ ಮಾತನಾಡಿದ ಗಜಾನನ ಮಂಗಸೂಳಿ, ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಇಂದು ಅಥಣಿ ಪಟ್ಟಣದ ಬಡ ಕುಟುಂಬಗಳಿಗೆ ತರಕಾರಿ ವಿತರಿಸಲಾಗಿದೆ ಎಂದು ಮಂಗಸೂಳಿ ತಿಳಿಸಿದರು.
ಜಾಗತಿಕ ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರೈತರು ಬೆಳೆದಿರುವ ತರಕಾರಿಗೆ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ರಾಜ್ಯ ನಾಯಕರ ನಿರ್ದೇಶನದಂತೆ ರೈತರಿಂದ ನೇರವಾಗಿ ತರಕಾರಿ ಖರೀದಿಸಿ, ಬಡ ಕುಟುಂಬಗಳಿಗೆ ಉಚಿತವಾಗಿ ಹತ್ತು ಟನ್ ತರಕಾರಿ ನೀಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದಿಂದ ತಾಲೂಕಿನ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳನ್ನು ನೀಡುವುದಕ್ಕೆ ನಾವು ಸಿದ್ಧರಾಗಿದ್ದೇವೆ ಎಂದರು.