ನೆಲಮಂಗಲ: ಅಪಾರ್ಟ್ಮೆಂಟ್ ಅಸೋಸಿಯೇಷನ್ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ 73 ವರ್ಷದ ವೃದ್ಧನ ಮೇಲೆ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಆತನ ಸಹಚರರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಬೆಂಗಳೂರು ಉತ್ತರ ತಾಲೂಕು ಮಾಚೋಹಳ್ಳಿಯ ಜನಪ್ರಿಯ ಟೌನ್ ಶಿಪ್ ಬಳಿ ಘಟನೆ ನಡೆದಿದ್ದು, ಜನಪ್ರಿಯ ಟೌನ್ಶಿಪ್ ಓನರ್ಸ್ ಅಸೋಸಿಯೇಷನ್ ಸಭೆ ಇದೆ ಎಂದು ಕರೆಸಿ 73 ವರ್ಷದ ವೃದ್ಧನ ಮೇಲೆ ಹಲ್ಲೆ ಮಾಡಿದ್ದು, ಹಲ್ಲೆ ನಡೆಸಿದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಬಿಳಿಗಿರಿ ರಂಗಬಾಬು ಎಂಬ ವೃದ್ಧನ ಮೇಲೆ ಹಲ್ಲೆ ಮಾಡಲಾಗಿದ್ದು, ಕೊಳಚೆ ನೀರು ಹರಿಸುವ ವಿಚಾರದಲ್ಲಿ ಅಸೋಸಿಯೇಷನ್ ಸಭೆಯಲ್ಲಿ ಇವರು ಧ್ವನಿ ಎತ್ತಿದ್ದರು. ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸದಸ್ಯ ಉದ್ದಂಡಯ್ಯ ಮತ್ತು ಆತನ ಸಹಚರರಾದ ಸೋಮಶೇಖರ್, ಮೂರ್ತಿ, ರೂಪ ಎಂಬುವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವೃದ್ದ ಬಿಳಿಗಿರಿ ರಂಗಬಾಬು ಆರೋಪಿಸಿದ್ದಾರೆ,
ಜಿಲ್ಲಾ ಪಂಚಾಯತ್ ಸದಸ್ಯ ಉದ್ದಂಡಯ್ಯ ಎಂಬುವರು ಸಿಎಂ ರಾಜಕೀಯ ಕಾರ್ಯದರ್ಶಿ ಎ.ಆರ್. ವಿಶ್ವನಾಥ್ ಅವರ ಆಪ್ತರಾಗಿದ್ದಾರೆ. ಹಲ್ಲೆಗೊಳಗಾದ ವೃದ್ಧ 5 ನಿಮಿಷ ಮೂರ್ಛೆ ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.