ಬೆಂಗಳೂರು: ಪತ್ನಿಯನ್ನು ಹೆದರಿಸಲು ಕುಡುಕ ಗಂಡನೊಬ್ಬ ತನ್ನ ಮಗುವನ್ನೇ ಚೀಲದಲ್ಲಿ ತುಂಬಿ ಸ್ಕೂಟರ್ನಲ್ಲಿ ಕರೆದುಕೊಂಡು ಹೋಗುವ ಮೂಲಕ ವಿಕೃತಿ ಮೆರೆದ ಘಟನೆ ನಗರದಲ್ಲಿ ನಡೆದಿದೆ.
ಬೆಳ್ಳಂದೂರು ಬಳಿಯ ಸುಶೀಲ್‌ಕುಮಾರ್ ಎಂಬಾತ ಈ ಕೃತ್ಯವೆಸಗಿದವ. ಈತ ನಿತ್ಯ ಕಂಠಪೂರ್ತಿ ಕುಡಿದು ಬಂದು ಹೆಂಡತಿ ಜೊತೆ ಜಗಳವಾಡುತ್ತಿದ್ದನಂತೆ. ಇದರಿಂದ ರೋಸಿ ಹೋದ ಹೆಂಡತಿ ಪತಿ ಸುಶೀಲ್ಕುಮಾರ್ಗೆ ಸರಿಯಾಗೆ ಕ್ಲಾಸ್ ತಗೊಂಡಿದ್ದಳು. ಹೀಗಾಗಿ ಪತ್ನಿ ಮೇಲೆ ಕೋಪಕೊಂಡ ಸುಶೀಲ್, ಆಕೆಯನ್ನು ಭಯಪಡಿಸಲು ತನ್ನ ಸ್ವಂತ ಮಗುವನ್ನೇ ಚೀಲದಲ್ಲಿ ತುಂಬಿ ಸ್ಕೂಟರ್ನ ಫುಟ್ರೆಸ್ಟ್ ಬಳಿ ಇರಿಸಿ ಕೊಂಡೊಯ್ದಿದ್ದಾನೆ.
ಸುಶೀಲ್ ಈ ರೀತಿ ಮಗು ಕರೆದುಕೊಂಡು ಹೋಗುತ್ತಿರುವ ದೃಶ್ಯ ಗಮನಿಸಿದ ಕೋರಮಂಗಲ ಮೂಲದ ಯುವತಿಯೊಬ್ಬಳು, ಯಾರೋ ಮಗುವನ್ನು ಕಿಡ್ನ್ಯಾಪ್ ಮಾಡುತ್ತಿದ್ದಾರೆಂದು ಭಾವಿಸಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಅಲ್ಲದೆ ಫೋಟೊ ಒಂದನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಳು. ಇದನ್ನು ಗಮನಿಸಿ ಅಲರ್ಟ್ ಆದ ಆಗ್ನೇಯ ವಿಭಾಗ ಪೊಲೀಸರು, ಫೋರಂ ಮಾಲ್ ಬಳಿ ಸ್ಕೂಟರ್ ತಡೆದು ನಿಲ್ಲಿಸಿ, ಸುಶೀಲ್‌ನಿ ವಿಚಾರಿಸಿದ್ದಾರೆ. ಈ ವೇಳೆ ಆತ ಹೆಂಡತಿಯ ಮೇಲಿನ ಕೋಪಕ್ಕೆ ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ, ಇನ್ಮುಂದೆ ಈ ರೀತಿ ಮಾಡಿದ್ರೆ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಎಚ್ಚರಿಸಿ ಕಳಿಸಿದ್ದಾರೆ.