ಹುಬ್ಬಳ್ಳಿ: ಭಾರತ ಅತಿ ಶೀಘ್ರದಲ್ಲೆ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ಭವಿಷ್ಯ ನುಡಿದಿದ್ದಾರೆ.
ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಭೆ ನಡೆಸಲಾಗುತ್ತಿದ್ದು, ಬಿಜೆಪಿಯ ಪ್ರಮುಖರೊಂದಿಗೆ ಬೆಳಗ್ಗೆಯಿಂದ ಸಂಜೆವರೆಗೆ ದೀರ್ಘ ಕಾಲದ ಸಮಾಲೋಚನೆ ನಡೆಸುತ್ತೇವೆ. ಚುನಾವಣೆಗೆ ಬೇಕಾಗುವ ಎಲ್ಲ ರಣತಂತ್ರ ರೂಪಿಸಲಾಗುವುದು. ಕಾಂಗ್ರೆಸ್ ನಾಯಕತ್ವ ಇಲ್ಲದ ಪಾರ್ಟಿ ಆಗಿದ್ದು, ಶೀಘ್ರವೇ ಭಾರತ ಕಾಂಗ್ರೆಸ್ ಮುಕ್ತಗೊಳಲಿದೆ ಎಂದಿದ್ದಾರೆ.
ರಾಜ್ಯದಲ್ಲಿ ಉಂಟಾದ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಹಣಕಾಸಿನ ಕೊರತೆಯಿಲ್ಲ. ಈ ಹಿಂದೆ ನೆರೆ ಉಂಟಾದಾಗ ರೂಪಿಸಲಾದ ಸೂಕ್ತ ಪರಿಹಾರವನ್ನು ಒದಗಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಇನ್ನೂ ಸಿದ್ದರಾಮಯ್ಯ ಸ್ಪೀಕರ್ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಿದ್ದು, ಅದು ಅವರಿಗೆ ಯೋಗ್ಯವಲ್ಲ. ದೇಶದ ಇತಿಹಾಸದಲ್ಲಿ ಯಾರೊಬ್ಬರೂ ಸ್ಪೀಕರ್ ವಿರುದ್ದ ಏಕವಚನದಲ್ಲಿ ಮಾತನಾಡಿದ್ದು ಇಲ್ಲ. ಇದು ಅವರಿಗೆ ಶೋಭೆ ತರುವುದಿಲ್ಲ. ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು. ಅಲ್ಲದೇ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಾಡುತ್ತೇವೆ. ಇನ್ನೂ ಮುಂದಾದರು ಸಿದ್ದರಾಮಯ್ಯ ನಾಲಿಗೆ ಬೀಗಿ ಹಿಡಿದು ಮಾತನಾಡಲಿ ಎಂದರು.
ವೀರ ಸಾವರಕರ್ ಬಗ್ಗೆ ಎಬಿಸಿಡಿ ಗೊತ್ತಿಲ್ಲದ ಸಿದ್ದರಾಮಯ್ಯ ಮನಬಂದಂತೆ ಮಾತನಾಡುತ್ತಾರೆ. ಅವರು ಅಂಡಮಾನ್ಗೆ ಹೋಗಿ ಸಾವರ್ಕರ್ ಅನುಭವಿಸಿದ ಶಿಕ್ಷೆ ಏನೂ ಎಂಬುದನ್ನು ತಿಳಿದುಬರಲಿ. ಆಗ ಅವರ ತ್ಯಾಗ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.
ಬಿಜೆಪಿ ಹಕ್ಕುಚ್ಯುತಿ ಮಂಡನೆ ಮಾಡಲಿ ನೋಡೋಣ ಎಂದ ಸಿದ್ದರಾಮಯ್ಯ
ಹುಬ್ಬಳ್ಳಿ: ಸ್ಪೀಕರ್ ಬಗ್ಗೆ ಹಗುರವಾಗಿ ನಾನು ಮಾತನಾಡಿಲ್ಲ. ಬಿಜೆಪಿಯವರು ಬೇಕಾದರೆ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಲಿ. ನಾವು ಅದನ್ನು ಹೇಗೆ ತಡಿಯಬೇಕು ಎಂಬುದು ಗೊತ್ತಿದೆ ಎಂದು ಸಿ.ಎಂ. ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ರಾಜ್ಯದ ಪ್ರವಾಹ ಪೀಡಿತರಿಗೆ ಇಲ್ಲಿಯವರೆಗೆ ಸರಿಯಾಗಿ ಪರಿಹಾರ ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಅಲ್ಲದೇ ಕೇವಲ 10 ಸಾವಿರ ಕೊಟ್ಟು ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ.
ಪರಿಹಾರ ನೀಡುವ ಹಣದಲ್ಲೂ ತಾರತಮ್ಯ ಮಾಡಲಾಗುತ್ತಿದೆ. ರಾಜ್ಯದ ರೈತರಿಗೆ ಬೆಳೆ ಪರಿಹಾರ ಒದಗಿಸುವ ಕೆಲಸ ಆಗಿಲ್ಲ. ಮೋದಿ, ಶಾ ಸೇರಿಕೊಂಡು ಪುಲ್ವಾಮಾ ವಾಯುದಾಳಿ ವಿಷಯಗಳ ಕುರಿತು ಭಾವನಾತ್ಮಕ ವಿಚಾರ ಹೇಳಿ ಜನರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದರು. ಆದರೆ ಯಾವುದು ಯಶಸ್ಸು ನೀಡಲಿಲ್ಲ. ಈ ಹಿನ್ನಲೆಯಲ್ಲಿ ಬಿಜೆಪಿಯ ದುರ್ಬಲ ಆಡಳಿತದ ವಿರುದ್ದ ಪಾದಾಯಾತ್ರೆ ನಡೆಸುವ ಯೋಚನೆ ಇದ್ದು ಆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದರು.
ಡಿ.ಕೆ.ಶಿವಕುಮಾರ್ ಜಾಮೀನು ಪಡೆದು ಬಿಡುಗಡೆ ಹೊಂದಿದ್ದು, ಅವರು ಇಂದು ಬೆಂಗಳೂರಿಗೆ ಬರಲಿದ್ದಾರೆ. ಅವರನ್ನು ಪಕ್ಷ ಸ್ವಾಗತಿಸುತ್ತದೆ. ಆದರೆ ಸದ್ಯಕ್ಕಂತೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನನ್ನ ಪ್ರಕಾರ ಬದಲಾವಣೆ ಇಲ್ಲ. ಅಲ್ಲದೇ ಈ ವಿಷಯವನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.