ಬೆಂಗಳೂರು: ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೆ ನಿರ್ಲಕ್ಷ್ಯದಿಂದ ಉಂಟಾಗುತ್ತಿರುವ ಸಾವು ನೋವುಗಳ ಪ್ರಮಾಣವೇ ಹೆಚ್ಚಾಗುತ್ತಿದ್ದು,ಅಂತಹ ಸಂದರ್ಭದಲ್ಲಿ ಆಸ್ಪತ್ರೆಗಳು ಹಣದ ಮುಖ ನೋಡದೆ ಮಾನವೀಯತೆಯಿಂದ ಚಿಕಿತ್ಸೆ ನೀಡಬೇಕು ಎಂದು ಹೆಚ್ಚುವರಿ ಸಂಚಾರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಕಿವಿಮಾತು ಹೇಳಿದ್ದಾರೆ.
ನಗರದ ಸಂಚಾರಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಾಗರ್ ಆಸ್ಪತ್ರೆಯ ವತಿಯಿಂದ ಆಯೋಜಿಸಿದ್ದ ವಲ್ಡ್ ಹೆಡ್ ಇಂಜುರಿ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಸಂಚಾರಿ ಪೊಲೀಸರು ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರ ರೀತಿ ಬಾಂಧವ್ಯ ಬೆಸೆಯುವ ಸಲುವಾಗಿ ಒಂದು ವಾರದಲ್ಲಿ ಆಸ್ಪತ್ರೆ ಪಿಆರ್‌ಒ, ಆಸ್ಪತ್ರೆ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸರಿಗಾಗಿ ಆಪ್ತ ಸಮಾಲೋಚನಾ ಸಭೆಯನ್ನು ನಗರದ ಸೆಂಟ್ ಜಾನ್‌ಸ್ಕೂಲ್‌ನಲ್ಲಿ ಆಯೋಜಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
ದೇಶದಲ್ಲಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಅನಾರೋಗ್ಯ ಕಾರಣವಲ್ಲ.ರಸ್ತೆ ಅಪಘಾತಗಳೇ ಕಾರಣ. ಅನೇಕರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಾರೆ. ಕಾರು ಚಲಾಯಿಸುವಾಗಲೂ ಸೀಟ್ ಬೆಲ್ಟ್ ಹಾಕಿಕೊಳ್ಳುವುದಿಲ್ಲ. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದ ವಾಹನ ಚಲಾವಣೆ ಮಾಡಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಉಂಟಾಗುವ ಅಪಘಾತಗಳಲ್ಲಿ ಪ್ರಾಣಕಳೆದುಕೊಳ್ಳುತ್ತಿರುವ ಶೇ.85 ರಷ್ಟು ಜನರಲ್ಲಿ ಪಾದಚಾರಿಗಳು, ದ್ವಿಚಕ್ರವಾಹನ ಸವಾರರು ಹಾಗೂ ಸೈಕಲ್ ಸವಾರರೇ ಇದ್ದಾರೆ ಎಂದರು.