ಬೆಂಗಳೂರು: ಕೋವಿಡ್-19 ಸೋಂಕು ಭೀತಿ ಇದ್ರೂ ಮಾಸ್ಕ್ ಧರಿಸದೆ ಬೇಕಾಬಿಟ್ಟಿ ಓಡಾಡುವವರಿಗೆ ಬಿಬಿಎಂಪಿ ದಂಡ ವಿಧಿಸಲು ಆರಂಭಿಸಿದೆ.
ಇಂದು ಬೆಳ್ಳಂಬೆಳಗ್ಗೆ ಕೋರಮಂಗಲ ಜಂಕ್ಷನ್ ನಲ್ಲಿ ಮಾಸ್ಕ್ ಹಾಕದೆ ಓಡಾಡಿದವರಿಗೆ ಮಾರ್ಷಲ್ಸ್ ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಮಾಸ್ಕ್ ಹಾಕದೆ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋದವರಿಗೆ, ದ್ವಿಚಕ್ರ ವಾಹನದಲ್ಲಿ ಮಾಸ್ಕ್ ಹಾಕದೇ ಓಡಾಡಿದಕ್ಕೆ, ಮಾಸ್ಕ್ ಸುರಕ್ಷತೆ ಇಲ್ಲದೇ ಬೀದಿಗೆ ಬಂದಿದಕ್ಕೆ ದಂಡ ವಿಧಿಸಲಾಗಿದೆ.
ಸಾರ್ವಜನಿಕವಾಗಿ ಕೆಡುಕು ಮಾಡಿದ ತಪ್ಪಿನ ಅಡಿಯಲ್ಲಿ ದಂಡ ವಿಧಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 138 ರಷ್ಟು ಕೊರೊನಾ ಪಾಸಿಟಿವ್ ಕಂಡುಬಂದ ಹಿನ್ನಲೆ ಪಾಲಿಕೆ ಈ ಕಠಿಣ ನಿಯಮ ಜಾರಿಗೊಳಿಸಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಹಾಗೂ ಕಚೇರಿಯಲ್ಲಿ ಐದಕ್ಕಿಂತ ಹೆಚ್ಚು ಜನ ಇದ್ದರೆ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಇನ್ನು ಬಳಸಿದ ಮಾಸ್ಕ್ ಹಾಗೂ ಗ್ಲೌಸ್ ಅನ್ನು ಪ್ರತ್ಯೇಕ ಪೇಪರ್ ಕವರ್ ನಲ್ಲಿ ಹಾಕಿ ಪೌರಕಾರ್ಮಿಕರಿಗೆ ನೀಡಬೇಕು.
ಸಾರ್ವಜನಿಕ ಜಾಗಗಳಲ್ಲಿ ಉಗುಳುವುದು, ಮೂತ್ರ ವಿಸರ್ಜನೆ ಮಾಡುವುದನ್ನೂ ಕೂಡಾ ಅಪರಾಧ ಎಂದು ಪರಿಗಣಿಸಿ ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.
ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ (ತುರ್ತು ಪರಿಸ್ಥಿತಿ ನಿರ್ವಹಣಾ ಪರಿಚ್ಛೇದ), ಘನತ್ಯಾಜ್ಯ ನಿರ್ವಹಣಾ ನಿಯಮಗಳ ಅಡಿಯಲ್ಲಿ ಮೊದಲ ತಪ್ಪಿಗೆ ಒಂದು ಸಾವಿರ ದಂಡ, ಪುನರಾವರ್ತಿಸಿದರೆ ಎರಡು ಸಾವಿರ ದಂಡ ವಿಧಿಸುವ ಕಾನೂನಿಗೆ ಅವಕಾಶವಿದೆ ಎಂದು ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.