ಬೆಂಗಳೂರು: ಮೂವತ್ತು ವರ್ಷಗಳ ಹಿಂದಿನ ಗಲಭೆಗಳ ಕೇಸ್ ವಾಪಸ್ ಪಡೆಯಲಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸರ್ಕಾರಕ್ಕೆ ಮನವಿ ಮಾಡಿದರು.
ಹುಬ್ಬಳ್ಳಿ ಹಳೇ ಗಲಭೆ ಸಂಬಂಧ ರಾಮ ಭಕ್ತರ ಬಂಧನ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಹಿಂದೆಲ್ಲಾ ಅಯೋಧ್ಯೆ ವಿಚಾರದಲ್ಲಿ ಗಲಭೆಗಳಾದ ಕೆಲವರನ್ನು ರೌಡಿಶೀಟರ್ ಲಿಸ್ಟ್‌ಗೆ ಸೇರಿಸಿದ್ದರು. ರೌಡಿಶೀಟರ್ನಲ್ಲಿ 50-60 ವರ್ಷದ ವಯಸ್ಸಾದವರೇ ಇದ್ದು, ನಾನು ಸಿಎಂ ಆಗಿದ್ದಾಗ ಶುಭಕೋರಲು ಬಂದಿದ್ದ ಎಲ್ಲಾ ಕಮಿಷನರ್‌ಗಳಿಗೆ ವಯಸ್ಸಾದವರನ್ನು ರೌಡಿಶೀಟರ್‌ನಿಂದ ತೆಗೆಯಲು ಹೇಳಿದ್ದೆ. ಈಗಿನ ಕಮಿಷನರ್‌ಗೂ ಹೇಳಿದ್ದೆ. ರೌಡಿ ಪರೇಡ್ಗೆ ಪ್ರತಿ ಬಾರಿ ಅವರೇ ಬರುತ್ತಿರುತ್ತಾರೆ. ಕ್ಯಾಬಿನೆಟ್ನಲ್ಲಿ ಈ ಬಗ್ಗೆ ವಿತ್ ಡ್ರಾ ಮಾಡಿಸುವ ಪ್ರಯತ್ನವನ್ನೂ ನಾನು ಮಾಡಿದ್ದೇನೆ. ಯಾವುದೇ ಸರ್ಕಾರದಲ್ಲಾಗಿರಲಿ, 420ಗಳು, ಕ್ರಿಮಿನಲ್‌ಗಳಿದ್ದರೆ ಬಿಡಬೇಡಿ. 30 ವರ್ಷದ ಹಿಂದಿನ ಗಲಭೆಗಳ ಕೇಸ್ ವಾಪಸ್ ಪಡೆಯಲಿ" ಎಂದು ಆಗ್ರಹಿಸಿದರು.
"ರಾಮ ಮಂದಿರಕ್ಕೆ ನನ್ನದೂ ಕಾಂಟ್ರಿಬ್ಯೂಶನ್ ಇದೆ. ಎರಡು ಕೋಟಿ ರೂ.ವರೆಗೆ ದೇಣಿಗೆ ಸಂಗ್ರಹ ಮಾಡಿಸಿದ್ದೆ. ಪಾರ್ಟಿ ಬಿಟ್ಟ ಮೇಲೆ ರಾಮ ಭಕ್ತರಲ್ಲ ಎಂದರೆ ಹೇಗೆ?. ಕೆಲವು ವ್ಯಾಪಾರಿಗಳನ್ನು ಸೇರಿಸಿ ಹಣ ಸಂಗ್ರಹಿಸಿ ಕೊಟ್ಟಿದ್ದೆ. ರಾಜ್ಯ ಬಿಜೆಪಿ ಕಥೆ ಇಷ್ಟೇ. ಸದಾನಂದಗೌಡ್ರೇ ಹೇಳಿದ್ದಾರಲ್ಲಾ ಹೇಳೋರು ಕೇಳೋರು ಇಲ್ಲಾ ಅಂತ. ರಾಜ್ಯ ಬಿಜೆಪಿ ನಾಯಕರಿಗೆ ಕಿವಿ ಹಿಂಡೋರೇ ಇಲ್ಲ. ಎಲೆಕ್ಷನ್ ಆದ್ಮೇಲೆ ಉಸ್ತುವಾರಿ ಕಾಣ್ತಿಲ್ಲ. 40 ಸಾವಿರ ಕೋಟಿ ಕೋವಿಡ್ ಹಗರಣ ಅಂತಾರೆ. ಯಾರಾದ್ರೂ ಅವರ ಮೇಲೆ ಕ್ರಮ ತೆಗೆದುಕೊಂಡ್ರಾ?. ರಾಜ್ಯದಲ್ಲಿ ಬಿಜೆಪಿಯನ್ನೇ ಮುಗಿಸಬೇಕು ಅಂತಿದ್ದಾರೇನೋ. ಮೋದಿ, ಶಾ ಎಲ್ಲಾ ಯಾಕೆ ಸೈಲೆಂಟಾಗಿದ್ದಾರೋ ಗೊತ್ತಿಲ್ಲ" ಎಂದರು.
"ಈಗ ಮಾತನಾಡುವವರು, ಹಿಂದೆ ಅವರದ್ದೆ ಸರ್ಕಾರ ಇತ್ತು. ಬಿಎಸ್‌ವೈ, ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ವಿತ್ ಡ್ರಾ ಮಾಡಿಸಬಹುದಿತ್ತಲ್ವಾ? ಈಗ ಯಾಕೆ ಇಷ್ಟು ಕಿಚ್ಚಿನಿಂದ ಹೋರಾಟ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಅದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ. ನಮ್ಮ ಫರ್ಮಾಮೆನ್ಸ್ ಮೇಲೆ ನಾವು ಚುನಾವಣೆಗೆ ಹೋಗಬೇಕು. ಧರ್ಮಗಳ ನಡುವೆ ಗಲಭೆ ಸೃಷ್ಟಿಸಿ ಚುನಾವಣೆಗೆ ಹೋಗುವುದಲ್ಲ" ಎಂದು ವಾಗ್ದಾಳಿ ನಡೆಸಿದರು.
ಅಡ್ವಾಣಿ, ಸಿಎಂಗೆ ರಾಮಮಂದಿರ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿ, "ಅಯೋಧ್ಯ ರಾಮ ಮಂದಿರ ಆಂದೋಲನ ಶುರು ಮಾಡಿದ್ದು ಅಡ್ವಾಣಿ. ಈ ಆಂದೋಲನದಿಂದಲೇ ಬಿಜೆಪಿಗೆ ಅನುಕೂಲ ಆಯ್ತು. ಮಾಧ್ಯಮಗಳಲ್ಲಿ ಬಂದ ಬಳಿಕ ಟ್ರಸ್ಟ್‌ನ ಕಾರ್ಯದರ್ಶಿಗಳು ಹೋಗಿ ಆಹ್ವಾನ ಪತ್ರಿಕೆ ನೀಡಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಅವರು ಆಹ್ವಾನ ಕೊಟ್ಟು, 'ವಯಸ್ಸಾಗಿದೆ, ಮನೆಯಲ್ಲೇ ಕುಳಿತು ವೀಕ್ಷಿಸಿ' ಅಂದಿದ್ದಾರಂತೆ. ಇದು ಕೊಟ್ಟಂತೆಯೂ ಆಗಬೇಕು, ಕೊಡದಂತೆಯೂ ಆಗಬೇಕು. ಇನ್ವಿಟೇಷನ್ ಕೊಟ್ಟು ಪರೋಕ್ಷವಾಗಿ ಬರಬೇಡಿ ಅಂದ್ರೆ ಏನರ್ಥ'' ಎಂದು ಶೆಟ್ಟರ್ ಪ್ರಶ್ನಿಸಿದರು.
ಇದನ್ನೂ ಓದಿ: ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ: ಇಬ್ಬರಿಗೆ ಸುಪ್ರೀಂ ಕೋರ್ಟ್ನಿಂದ ಜಾಮೀನು ಮಂಜೂರು