ಬೆಂಗಳೂರು: ಸಂಯುಕ್ತ ಕಿಸಾನ್ ಮೋರ್ಚಾ ದೇಶದಾದ್ಯಂತ ಬಂದ್ ಮಾಡಲು ಕರೆ ನೀಡಿದ್ದು, ಕರ್ನಾಟಕ ಬಂದ್ ಮಾಡುವ ಬಗ್ಗೆ ರೈತ ಸಂಘಟನೆಗಳು ಕರೆ ನೀಡಿದ್ದವು. ಆದರೆ ಬಂದ್ಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬಣ ಹಿಂದೇಟು ಹಾಕಿದೆ.
ಈ ಬಗ್ಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಬಂದ್ ಮಾಡಲು ಪೂರ್ವಸಿದ್ಧತೆ ಮಾಡಿಕೊಳ್ಳಲು ಮಾನಸಿಕವಾಗಿ ತಯಾರಿಲ್ಲ. ಯಾವುದೇ ತಯಾರಿ ಇಲ್ಲದೆ ಬಂದ್ ಮಾಡಲು ಸಾಧ್ಯವಿಲ್ಲ. ಇನ್ನೂ ಒಂದೇ ದಿನ ಬಾಕಿ ಇರೋದು. ಬಂದ್ ಮಾಡಿದ್ರೆ ಯಶಸ್ವಿಯಾಗಲ್ಲ.
ಮೊನ್ನೆಯ ದಿನ ಫ್ರೀಡಂ ಪಾರ್ಕ್ನಲ್ಲಿ ಯಾರೋ ಒಬ್ಬರು 26ರಂದು ಬಂದ್ ಮಾಡುತ್ತೇವೆ ಎಂದು ಫ್ಲೆಕ್ಸ್ ಹಿಡಿದುಕೊಂಡಿದ್ರು. ಅದರಲ್ಲಿ ಏನಿದೆ ಅಂತ ನನಗೂ ಗೊತ್ತಾಗಲಿಲ್ಲ. ಇದೀಗ 26ರಂದು ಭಾರತ್ ಬಂದ್ಗೆ ನಾವು ತಟಸ್ಥವಾಗಿರುತ್ತೇವೆ. ಬಂದ್ ಮಾಡಿಕೊಳ್ಳುವವರು ಮಾಡಿಕೊಳ್ಳಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಇದನ್ನೂ ಓದಿ: ಶಿವರಾಮ ಕಾರಂತ ಬಡಾವಣೆ ಯೋಜನೆಗೆ ಅವಕಾಶ ನೀಡಲ್ಲ; ಕೋಡಿಹಳ್ಳಿ ಚಂದ್ರಶೇಖರ್
ಬಂದ್ನ ಸಂದೇಶ ಉತ್ತಮವಾಗಿದೆ. ಪ್ರತೀ ವಾರ ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆ ಸೇರಿದಂತೆ ಇತರೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದನ್ನು ಪ್ರತಿಭಟನೆಯ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಸಂದೇಶ ತಲುಪಿಸಬೇಕಾಗಿದೆ. ಮಹಾಪಂಚಾಯತ್ ಹಾಗೂ ಇತರ ಚಳವಳಿಗಳ ಹಿನ್ನೆಲೆ ಬಂದ್ಗೆ ಬೇಕಾದ ಸಿದ್ಧತೆ ಮಾಡಿಕೊಳ್ಳದೇ ಇರೋದು ಒಂದಷ್ಟು ಮುಜುಗರ ಆಗ್ತಿದೆ. ಒಂದೇ ದಿನದಲ್ಲಿ ಕರೆ ಕೊಟ್ಟು ಬಂದ್ ಯಶಸ್ವಿ ಮಾಡೋದು ಅಸಾಧ್ಯ. ಹಾಗಾಗಿ ಎಲ್ಲೆಲ್ಲಿ ಚಳುವಳಿಗೆ ಸ್ಪಂದನೆ ಸಿಗುತ್ತದೋ ಸಿಗಲಿ. ಮುಂದಿನ ಚಳವಳಿಗಳನ್ನು ಯಶಸ್ವಿ ಮಾಡುತ್ತೇವೆ ಎಂದರು.