ಬೆಂಗಳೂರು: ಲೋಕಸಭಾ ಫಲಿತಾಂಶದ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ ಎಂದು ಡಿಸಿಎಂ ಡಾ. ಪರಮೇಶ್ವರ್ ತಿಳಿಸಿದ್ದಾರೆ.
ಕುಮಾರ ಕೃಪ ಅತಿಥಿಗೃಹದಲ್ಲಿ ಮಾತನಾಡಿದ ಅವರು ಯಾಕೆ ಇಂತಹ ಫಲಿತಾಂಶ ಬಂತು ಎಂಬುದರ ಕುರಿತಾಗಿ ಚರ್ಚೆ ನಡೆಸಿದ್ದೇವೆ. ಎರಡೂ ಪಕ್ಷ ಜೊತೆ ಗೂಡಿ ಚುನಾವಣೆ ಎದುರಿಸಿದ್ದೆವು. ಹೀಗಾದರೂ ಇಂತಹ ಫಲಿತಾಂಶ ಹೇಗೆ ಬಂತು. ಈ ಕುರಿತಾಗಿ ಇಂದಿನ ಸಭೆಯಲ್ಲಿ ಚರ್ಚೆ ನಡೆದಿದೆ. ಪ್ರಸ್ತುತ ರಾಜಕೀಯ ಕುರಿತಾಗಿಯೂ ಚರ್ಚೆ ನಡೆದಿದೆ. ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಶಾಸಕರಿಗೆ ಅವರವರ ಕ್ಷೇತ್ರಗಳ ಸಮಸ್ಯೆ ತಿಳಿಸಬೇಕು ಎಂದು ಸೂಚಿಸಿದ್ದೇವೆ. ಸರ್ಕಾರ ಸುಭದ್ರವಾಗಿದೆ. ಯಾವುದೇ ಗೊಂದಲ ಇಲ್ಲ ಎಂದರು.
ಈ ಬಗ್ಗೆ ಮಾತನಾಡಿದ ಸಚಿವ ಡಿಕೆಶಿ, ನಮ್ಮ ಶಾಸಕರೆಲ್ಲ ಜೊತೆಗಿದ್ದಾರೆ. ಇಂದು ನಡೆಯುವ ಶಾಸಕಾಂಗ ಸಭೆಯಲ್ಲಿ ಒಂದಿಬ್ಬರನ್ನು ಹೊರತು ಪಡಿಸಿ ಉಳಿದವರೆಲ್ಲ ಆಗಮಿಸುತ್ತಾರೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲಾ ಒಂದಾಗಿದ್ದೇವೆ. ಇಂದಿನ ಸಭೆಯಲ್ಲಿ ಹಲವು ವಿಚಾರ ಚರ್ಚೆಯಾಗಿದೆ. ಎಲ್ಲವನ್ನೂ ವಿವರಿಸಲಾಗದು ಎಂದರು.
ಇನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಮಾತನಾಡಿ, ಸರ್ಕಾರ ಉಳಿಸಿಕೊಳ್ಳುವ ತಂತ್ರಗಾರಿಕೆ ರೂಪಿಸಿದ್ದೇವೆ. ಅದನ್ನು ಮಾಧ್ಯಮಗಳಿಗೆ ವಿವರಿಸಲು ಸಾಧ್ಯವಿಲ್ಲ. ಹೇಳಿದರೆ, ಅದು ತಂತ್ರಗಾರಿಕೆಯಾಗಿ ಉಳಿಯಲ್ಲ. ಎಲ್ಲಾ ಶಾಸಕರು ನಮ್ಮೊಂದಿಗೆ ಇದ್ದಾರೆ. ಯಾರೂ ಎಲ್ಲಿಗೂ ಹೋಗಲ್ಲ. ಸರ್ಕಾರ ಸುಭದ್ರವಾಗಿದೆ ಎಂದರು.
ಇದೇ ವೇಳೆ ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡಿರುವ ಲಿಂಗಸಗೂರು ಶಾಸಕ ಡಿ.ಎಸ್. ಹುಲಗೇರಿ ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸವರಾಜ ದದ್ದಲ್ ಆಗಮಿಸಿದ್ದು, ಇವರ ಮನವೊಲಿಸುವ ಕಾರ್ಯ ನಡೆಯಿತು.