ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ಘನ ತ್ಯಾಜ್ಯ ವಿಲೇವಾರಿಯಲ್ಲಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ವಿಧಿಸುತ್ತಿರುವ ದಂಡದ ಪ್ರಮಾಣ ತೀರಾ ಕಡಿಮೆಯಿದೆ. ಇದರ ಪ್ರಮಾಣ ಹೆಚ್ಚಳ ಮಾಡುವುದರ ಜತೆಗೆ, ಐಪಿಸಿಯ ಸೆಕ್ಷನ್‌ಗಳ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಮೂಲಕ ನಿಯಮ ಉಲ್ಲಂಘನೆ ಮಾಡುವ ಕುರಿತು ಪರಿಶೀಲನೆ ನಡೆಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನಗರದಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ 11 ವಿವಿಧ ಸಾರ್ವಜನಿಕ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿ ವಿಚಾರಣೆಯನ್ನು ಅಕ್ಟೋಬರ್ 11ಕ್ಕೆ ಮುಂದೂಡಿದೆ.
ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಕಳೆದ 2012ರಿಂದ ಹಲವು ನಿರ್ದೇಶನಗಳನ್ನು ನೀಡುತ್ತಿದ್ದರೂ, ನಿಯಮಗಳ ಉಲ್ಲಂಘನೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ದಂಡ ಹೆಚ್ಚಳ ಶಿಕ್ಷೆ ಜಾರಿಯಾಗುವಂತೆ ಮಾಡಬೇಕಾಗಿದೆ ಎಂದು ಪೀಠ ತಿಳಿಸಿತು. ಅಲ್ಲದೇ, ದಂಡವನ್ನು ವಿಧಿಸುವ ಮೂಲಕ ಉದ್ದೇಶ ಸಾಧಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ದಂಡವನ್ನು ಹೆಚ್ಚಳ ಮಾಡಬೇಕಾಗಿದೆ ಎಂದು ಪೀಠ ಅಭಿಪ್ರಾಯ ಪಟ್ಟಿತು.
2016ರಿಂದ 2023ರ ವರೆಗಿನ ಅವಧಿಯಲ್ಲಿ ತ್ಯಾಜ್ಯ ಉಲ್ಲಂಘನೆ ಮಾಡಿದ ಒಟ್ಟು 3.84 ಕೋಟಿ ಮಂದಿಗೆ 11.66 ಕೋಟಿ ರು.ಗಳ ದಂಡ ವಿಧಿಸಿದ ಪಾಲಿಕೆ ಅಧಿಕಾರಿಗಳ ಕ್ರಮಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವವವರ ವಿರುದ್ಧ ಬಿಬಿಎಂಪಿ ವಿಧಿಸುತ್ತಿರುವ ದಂಡದ ಪ್ರಮಾಣ ತೀರಾ ಕಡಿಮೆ ಇದೆ. ಇದರಿಂದಾಗಿ ಎಚ್ಚರಿಕೆಯ ನಡುವೆಯೂ ಉಲ್ಲಂಘನೆಗಳು ಮುಂದುವರೆದಿವೆ ಎಂದು ಪೀಠ ಅಭಿಪ್ರಾಯ ಪಟ್ಟಿತು.
ಅಲ್ಲದೇ, ನಗರದಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿದ್ದು, ಅದರಿಂದ ಉತ್ಪಾದನೆಯಾಗುತ್ತಿರುವ ವೈದ್ಯಕೀಯ ತ್ಯಾಜ್ಯ ಆತಂಕವನ್ನುಂಟು ಮಾಡುತ್ತಿದೆ. ಹೀಗಾಗಿ ಈ ಸಂಬಂಧ ಮೆಡಿಕಲ್ ತ್ಯಾಜ್ಯವನ್ನು ನಿರ್ವಹಣೆ ಮಾಡುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೀಠ ಬಿಬಿಎಂಪಿಗೆ ಸೂಚನೆ ನೀಡಿದೆ.
ಪ್ರಕರಣದಲ್ಲಿ ಬಿಬಿಎಂಪಿ ಹಾಗೂ ಸರ್ಕಾರದೊಂದಿಗೆ ನಗರದ ವಿವಿಧ ಭಾಗಗಳ ನಿವಾಸಿಗಳ ಸಂಘಗಳು ಪ್ರತಿವಾದಿಯಾಗಿವೆ. ಅಪಾರ್ಟ್‌ಮೆಂಟ್‌ಗಳ ಮಾಲೀಕರು, ಸಹಕಾರಿ ಸಂಘಗಳ ಸದಸ್ಯರು ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕ್ರಮಕ್ಕೆ ಮುಂದಾಗಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮಾತ್ರವಲ್ಲದೇ, ಸಾರ್ವಜನಿಕರು ಭಾಗಿಯಾಗುವಂತೆ ನೋಡಿಕೊಳ್ಳಬೇಕು ಎಂದು ಪೀಠ ಅಭಿಪ್ರಾಯ ಪಟ್ಟಿದೆ.
ಪ್ರಕರಣ ಸಂಬಂಧ ಈವರೆಗೂ ನೀಡಿರುವ ನಿರ್ದೇಶನಗಳನ್ನು ಕೈಗೊಂಡಿರುವುದಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ವೇಳೆ ಪ್ರಮಾಣಪತ್ರದ ಮೂಲಕ ವರದಿ ಸಲ್ಲಿಕೆ ಮಾಡಬೇಕು ಎಂದು ಬಿಬಿಎಂಪಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ : ಮಿಷನ್ ವಾತ್ಸಲ್ಯ ಜಾರಿಗೆ ಪ್ರಸ್ತಾವನೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ