ಬೆಂಗಳೂರು: ದೇಶಾದ್ಯಂತ ಕೋವಿಡ್ ರೋಗ ಹರಡಿದ್ದು, ಹಲವು ರಾಜ್ಯಗಳು ಲಾಕ್ಡೌನ್ ಘೋಷಣೆ ಮಾಡಿವೆ. ಈ ನಡುವೆ ಕರ್ನಾಟಕದಲ್ಲಿ ದಿನೇ ದಿನೇ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಅದರ ನಿಯಂತ್ರಣಕ್ಕೆ ಲಾಕ್ಡೌನ್ ಜಾರಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸ್ವಂತ ವಾಹನಗಳಿಂದ ಹಿಡಿದು ಸಾರ್ವಜನಿಕ ಸೇವೆಗಾಗಿ ಇರುವ ಬಸ್ಸು, ಆಟೋ, ಟ್ಯಾಕ್ಸಿ, ಮೆಟ್ರೋ ಹೀಗೆ ಸಾರಿಗೆ ಸೇವೆಗಳ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ಆದರೆ ರೈಲುಗಳು ಹಾಗೂ ವಿಮಾನಗಳ ಹಾರಾಟ ಯಥಾಸ್ಥಿತಿಯಲ್ಲಿದೆ.
ಕೆಎಸ್ಆರ್ಟಿಸಿ-ಬಿಎಂಟಿಸಿ ಅಗತ್ಯ ಸೇವೆಗಷ್ಟೇ ಮೀಸಲು:
ರಾಜ್ಯ ಸರ್ಕಾರವು ಕೋವಿಡ್ ನಿಯಂತ್ರಣಕ್ಕಾಗಿ ಏಪ್ರಿಲ್ 26 ರಂದು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಬಳಿಕ ಸೋಂಕು ಹರಡುವುದನ್ನ ತಡೆಗಟ್ಟಲು ಇನ್ನಷ್ಟು ಕಟ್ಟುನಿಟ್ಟಿನ ಕ್ರಮವಾಗಿ ಮೇ 10ರ ಬೆಳಿಗ್ಗೆ 6 ಗಂಟೆಯಿಂದ ಮೇ 24ರ ಬೆಳಿಗ್ಗೆ 6ರ ತನಕ ಲಾಕ್ಡೌನ್ ಜಾರಿ ಮಾಡಿದೆ. ಹೀಗಾಗಿ, ಕೆಎಸ್ಆರ್ಟಿಸಿ-ಬಿಎಂಟಿಸಿ ಬಸ್ಸುಗಳ ಓಡಾಟ ಸಂಪೂರ್ಣ ಸ್ಥಗಿತವಾಗಿದೆ. ಆದರೆ ಅಗತ್ಯ ಸೇವೆಗಾಗಿ ನಿತ್ಯ ಬಿಎಂಟಿಸಿಯಿಂದ 150 ಬಸ್ಸುಗಳು ಹಾಗೂ ಕೆಎಸ್ಆರ್ಟಿಸಿಯಿಂದ 78 ಬಸ್ಸುಗಳು ರಾಜ್ಯಾದ್ಯಂತ ಓಡಾಡುತ್ತಿದೆ. ಆದರೆ ಇದು ಅಗತ್ಯ ಸೇವೆಗೆ ಕೆಲಸ ಮಾಡುವ ಆರೋಗ್ಯ ಸಿಬ್ಬಂದಿ, ಪೊಲೀಸ್ ಇಲಾಖೆ ಸೇರಿದಂತೆ ಹಲವರಿಗಷ್ಟೇ ಸೀಮಿತ. ಜನ ಸಾಮಾನ್ಯರು ಈ ಸೇವೆಯನ್ನು ಬಳಸುವಂತಿಲ್ಲ.
ನಮ್ಮ ಮೆಟ್ರೋ ಸೇವೆ ಇಲ್ಲ- ತುರ್ತು ಪರಿಸ್ಥಿತಿಗಷ್ಟೇ ಆಟೋ ಬಳಕೆ:
ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಓಡಾಟವಿಲ್ಲ. ವಿಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಸಂಚಾರ ನಿಂತಿದ್ದು, ಇದೀಗ ಲಾಕ್ಡೌನ್ನಲ್ಲೂ ಮುಂದುವರೆದಿದೆ. ಇತ್ತ ಆಟೋ, ಟ್ಯಾಕ್ಸಿ ಓಡಾಟ ಇದ್ದರೂ ಸಹ ಅದನ್ನ ತುರ್ತು ಪರಿಸ್ಥಿತಿಗಷ್ಟೇ ಬಳಸಿಕೊಳ್ಳಬಹುದು. ಅದಕ್ಕೂ ಸರಿಯಾದ ಕಾರಣ, ದಾಖಲೆಯನ್ನು ಪೊಲೀಸರಿಗೆ ನೀಡಬೇಕು. ಇನ್ನು ರೈಲಿನಲ್ಲಿ ಆಗಮಿಸಿದರೆ ಪ್ರಯಾಣಿಕರು ಆಟೋ-ಟ್ಯಾಕ್ಸಿ ಮೂಲಕ ತಮ್ಮ ಮನೆಗೆ ತೆರಳಬಹುದು. ಆದರೆ ರೈಲು ಟಿಕೆಟ್ ಇರುವುದು ಕಡ್ಡಾಯವಾಗಿದೆ.
ಹೊರ ರಾಜ್ಯದ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ರೈಲುಗಳು:
ಇತ್ತ ರೈಲು ಸೇವೆಯು ಎಂದಿನಂತೆ ಇದ್ದು, ನಿತ್ಯ ಸಾವಿರಾರು ಪ್ರಯಾಣಿಕರು ಹೊರ ರಾಜ್ಯಗಳಿಗೆ ಪ್ರಯಾಣಿಸುತ್ತಿದ್ದಾರೆ. ರಾಜಸ್ಥಾನ, ಮಹಾರಾಷ್ಟ್ರ, ಒಡಿಶಾ, ಯುಪಿ, ಬಿಹಾರ ಸೇರಿದಂತೆ ಬೆಂಗಳೂರಿನಲ್ಲಿದ್ದ ವಲಸೆ ಕಾರ್ಮಿಕರು ತಮ್ಮೂರುಗಳಿಗೆ ಪ್ರಯಾಣಿಸುತ್ತಿದ್ದಾರೆ.
ಜನಸಂದಣಿ ಕಡಿಮೆ ಇರುವ ರೈಲುಗಳು ಬಂದ್:
ಪ್ರಯಾಣಿಕರ ಸಂಖ್ಯೆ ವಿರಳವಾಗಿರುವ ಭಾಗಗಳಿಗೆ ರೈಲು ಸಂಚಾರ ರದ್ದು ಮಾಡಲಾಗಿದೆ. ಮೇ ತಿಂಗಳ ಅಂತ್ಯದವರೆಗೆ ರೈಲು ಸಂಚಾರ ರದ್ದು ಮಾಡಲಾಗಿದೆ.
ಅಷ್ಟೇ ಅಲ್ಲದೆ ಕೊರೊನಾ ಕಾರಣಕ್ಕೆ ರೈಲ್ವೆ ನಿಲ್ದಾಣದಲ್ಲಿ ತಿಂಡಿ ತಿನಿಸು ಮಾರುವುದಕ್ಕೆ ನಿರ್ಬಂಧ ಹೇರಲಾಗಿದೆ. ನಿಲ್ದಾಣದೊಳಗೆ ಅನಗತ್ಯ ಓಡಾಟ ತಪ್ಪಿಸಲು ಫ್ಲಾಟ್ ಫಾರಂ ಟಿಕೆಟ್ ರೇಟ್ ಹೆಚ್ಚಳ ಮಾಡಲಾಗಿದೆ.
ನಾಲ್ಕು ಹೊರ ರಾಜ್ಯಗಳಿಂದ ಬರುವವರಿಗೆ ಕೆಲ ನಿಯಮ:
ಸದ್ಯ ಅಂತರ್ ಜಿಲ್ಲೆ, ಅಂತರ್ ರಾಜ್ಯಕ್ಕೆ ಬಸ್ಸುಗಳ ಓಡಾಟವಿಲ್ಲದೇ ಇದ್ದರೂ ಕೇರಳ, ಮಹಾರಾಷ್ಟ್ರ, ಪಂಜಾಬ್, ಛತ್ತೀಸ್ಗಡದಿಂದ ಬರುವ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಈ ರಾಜ್ಯದಿಂದ ಬರುವ ಎಲ್ಲ ಪ್ರಯಾಣಿಕರು 72 ಗಂಟೆಗಳ ಒಳಗೆ ಪರೀಕ್ಷಿಸಿದ ನೆಗೆಟಿವ್ ರಿಪೋರ್ಟ್ ಇರಬೇಕು. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದು ವಿಮಾನ, ರೈಲು ನಿಲ್ದಾಣ ಇತರೆ ವಾಹನಗಳ ಮೂಲಕ ಪ್ರಯಾಣಿಸುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ.
ಇದನ್ನೂ ಓದಿ: ಕೊರೊನಾ ಲಾಕ್ಡೌನ್: ಸಂಕಷ್ಟ ಹೇಳಿಕೊಂಡ ಹಾಸನದ ಆಟೋ ಚಾಲಕರು
ರೈಲಿನಲ್ಲಿ ಬರುವ ಪ್ರಯಾಣಿಕರ ನೆಗೆಟಿವ್ ರಿಪೋರ್ಟ್ ಅನ್ನು ತಪಾಸಣೆ ಮಾಡುವ ಜವಾಬ್ದಾರಿಯನ್ನು ರೈಲ್ವೆ ಇಲಾಖೆಯೇ ಹೊರಬೇಕಿದೆ. ತುರ್ತು ಪರಿಸ್ಥಿತಿಯ ಸಂದರ್ಭಕ್ಕೆ ವಿನಾಯಿತಿ ಕೊಟ್ಟಿದ್ದು ರಾಜ್ಯಕ್ಕೆ ಆಗಮಿಸಿದ ಕೂಡಲೇ ಸ್ವಾಬ್ ಪಡೆಯಲಾಗುತ್ತದೆ. ಜತೆಗೆ ಮನೆ ವಿಳಾಸ, ಐಡಿ ಕಾರ್ಡ್, ಫೋನ್ ನಂಬರ್ ಮಾಹಿತಿ ಪಡೆಯಲಾಗುತ್ತದೆ. ಒಂದು ವೇಳೆ ಕೊರೊನಾ ಪಾಸಿಟಿವ್ ಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. 2 ವರ್ಷದೊಳಗಿನ ಮಕ್ಕಳಿಗೆ ಹಾಗೂ ಸಾಂವಿಧಾನಿಕ ಹುದ್ದೆ, ಆರೋಗ್ಯ ಸಿಬ್ಬಂದಿಗೆ ವಿನಾಯಿತಿ ನೀಡಲಾಗಿದೆ.