ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವ ಬಗ್ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಕಾವೇರಿ ನೀರನ್ನು ಯಾವ ಅಡ್ಡಿ-ಆತಂಕ, ಲಂಗು-ಲಗಾಮಿಲ್ಲದೆ ಆರಾಮಾಗಿ ತಮಿಳುನಾಡಿಗೆ ಬಿಡ್ತಿದ್ದಾರೆ. ಇಡೀ ಜೀವನದುದ್ದಕ್ಕೂ ನೆಲ, ಜಲಕ್ಕಾಗಿ ಪ್ರಾಣವನ್ನೇ ಅರ್ಪಣೆ ಮಾಡಿದ್ದೀವಿ. ಆ ನೋವು ನಮಗೆ ಗೊತ್ತು. ರಾಜ್ಯದ ರೈತರ ನೋವು, ಪರಿಸ್ಥಿತಿ ನಮಗೆ ಗೊತ್ತು. ಯಾಕೆ ಸುಪ್ರಿಂ ಕೋರ್ಟ್‌ಗೆ ಹೋದ್ರಿ, ನಾವು ನೀರು ಬಿಡ್ತೀವಿ ಎಂದು ಸರ್ಕಾರ ಹೇಳಿದೆ. ಈ ರೀತಿ ಯಾವ ಸರ್ಕಾರಗಳೂ ಮಾತನಾಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡರು ಸಿಎಂ ಆಗಿದ್ದಾಗಲು ತಮಿಳುನಾಡಿಗೆ ನೀರು ಬಿಡಬೇಕಾದರೆ ಹರಸಾಹಸಪಟ್ಟಿದ್ದರು. ರೈತ ಮುಖಂಡರ ಸಭೆ ಕರೆದು, ತಮಿಳುನಾಡಿಗೆ ನೀರು ಬಿಟ್ಟರೆ ನಮ್ಮ ಪರಿಸ್ಥಿತಿ ಏನು, ನೀರು ಬಿಡದೇ ಇದ್ದರೆ ಏನಾಗುತ್ತೆ ಎಂದು ಅಭಿಪ್ರಾಯ ಕೇಳಿದ್ದರು. ಆದರೆ ಕೊನೆಗೆ ತಮಿಳುನಾಡಿಗೆ ನೀರು ಬಿಟ್ಟರು. ಆದರೆ ನಾನು ಕರ್ನಾಟಕ ಬಂದ್ ಮಾಡಿ ದೇವೇಗೌಡರ ನಿಲುವನ್ನು ಸ್ಪಷ್ಟವಾಗಿ ವಿರೋಧಿಸಿದ್ದೆ. ನಿಜವಾಗಲೂ ನಮ್ಮ ರೈತರು ತುಂಬಾ ನೋವಲ್ಲಿದ್ದಾರೆ. ರೈತರ ಬೆಳೆಗಳಿಗೆ ನೀರಿಲ್ಲ, ಕುಡಿಯಲು ನೀರಿಲ್ಲ. ಕಬ್ಬಿನ ಗದ್ದೆಗಳು ಒಣಗುತ್ತಿವೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರದವರ ಬಳಿ ಕೀ ಇದೆ ಎಂಬ ಮಾತು ಬೇಡ. ಕಾವೇರಿ ಕಬಿನಿ, ಹಾರಂಗಿ, ಹೇಮಾವತಿ ನಮ್ಮ ಜಲಾಶಯಗಳು. ನಾವು ಜಲಾಶಯ ಕಟ್ಟಿರೋದು ನಮಗಾಗಿ. ತಮಿಳುನಾಡಿಗೆ ನೀರು ಬಿಡೋಕಲ್ಲ. ತಮಿಳುನಾಡಲ್ಲಿ ಭಾರಿ ರಾಜಕೀಯ ಮಾಡ್ತಿದ್ದಾರೆ. ಒಂದು ಸಾರಿಯೂ ಅವರು ಪ್ರೀತಿಯಿಂದ ನಡೆದುಕೊಳ್ಳಲಿಲ್ಲ. ಸುಪ್ರಿಂ ಕೋರ್ಟ್‌ಗೆ ಅರ್ಜಿ ಹಾಕ್ತೀವಿ ಅಂತ ಹೆದರಿಸುತ್ತಾರೆ, ಬೆದರಿಕೆ ಹಾಕ್ತಾರೆ. ನಾಡಿನ ಜನತೆಗೆ ಮೇಕೆದಾಟು ಬಗ್ಗೆ ಡಿಕೆಶಿ ಹೇಳಬೇಕು. ನಿಮಗೆ ನಿಶಾನೆ ಸಿಕ್ಕಿದ್ಯಾ?. ಎಷ್ಟು ಹಣ ಇಟ್ಟಿದ್ದೀರಾ?. ಮೇಕೆದಾಟು ಬಗ್ಗೆ ಸ್ಪಷ್ಟ ನಿಲುವು ಹೇಳಿ ಎಂದು ಒತ್ತಾಯಿಸಿದರು.
ನಿಮ್ಮ ಮೇಲಿನ ಕೇಸ್ ವಾಪಸ್ ತಗೊಂಡ್ರಿ, ಆದರೆ ನಮ್ಮ ಗತಿ ಏನು?: ನಿಮ್ಮ, ಸಿಎಂ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆದುಕೊಂಡ್ರಿ. ನಮ್ಮ ಗತಿ ಏನು, ಕನ್ನಡಪರ ಹೋರಾಟಗಾರರ ರೈತರ ಗತಿ ಏನು?. ಮೇಕೆದಾಟು, ಗಡಿನಾಡು, ಹುಬ್ಬಳಿ ರೈತರ ಗತಿ ಏನು?. ಮೈಸೂರು ಮಂಡ್ಯ ರೈತರ ಗತಿ ಏನು?. ನಿಮ್ಮಿಬ್ಬರ ಕೇಸ್ ವಾಪಸ್ ಸುಲಭವಾಗಿ ಪಡೆದಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಹದಿನೈದು ದಿನಗಳೊಳಗಾಗಿ ಈ ಬಗ್ಗೆ ತೀರ್ಮಾನ ಕೈಗೊಳ್ಳಿ.
ಬೆಳಗಾವಿ ಮೂರು ಭಾಗ ಮಾಡಲು ತೀರ್ಮಾನ ಮಾಡಲು ಹೊರಟ್ಟಿದ್ದೀರಾ ಹುಷಾರ್. ಬಹಳ ಸಮಸ್ಯೆಗೆ ಸಿಲುಕುತ್ತೀರಿ. ಅದರ ಬಗ್ಗೆ ನೀವು ಯೋಚನೆ ಮಾಡಬೇಕು. ಮಹಾರಾಷ್ಟ್ರದವರು ಕಾಯ್ತಿದ್ದಾರೆ. ನಿಮ್ಮ ಸ್ವಾರ್ಥ, ಪಾಳೆಗಾರಿಕೆಗಾಗಿ ಮೂರು ಭಾಗ ಮಾಡಬೇಡಿ. ಇದು ಕೆಟ್ಟ ಸೂಚನೆ, ಅಪಾಯಕಾರಿ ಬೆಳವಣಿಗೆ. ಮೊದಲಿಂದಲೂ ಬೆಳಗಾವಿ ಮೇಲೆ ಮಹಾರಾಷ್ಟ್ರದವರಿಗೆ ಕಣ್ಣಿದೆ. ಸುವರ್ಣಸೌಧದಂತ ದೊಡ್ಡ ಕಟ್ಟಡ ಮೂಲೆ ಗುಂಪಾಗಿದೆ. ಬೆಳಗಾವಿ ಮೂರು ಭಾಗ ಮಾಡಿದ್ರೆ ತೀವ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು: ಡಿಕೆಶಿ ಮಂತ್ರಿ ಆಗಿರೋದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ? ಕುಮಾರಸ್ವಾಮಿ ಪ್ರಶ್ನೆ