ಬೆಂಗಳೂರು : ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿದ್ದನ್ನು ಖಂಡಿಸಿ ರಾಜಧಾನಿಯ ವಿವಿಧ ಭಾಗಗಳಲ್ಲಿ ಕನಕ ಚಾರಿಟಬಲ್ ಟ್ರಸ್ಟ್, ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಮೆಜೆಸ್ಟಿಕ್ ಬಳಿಯಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಎದುರು ಬೃಹತ್ ಪ್ರತಿಭಟನೆ ನಡೆಸಿದ ಸಂಘಟನೆ ಕಾರ್ಯಕರ್ತರು, ಎಂಇಎಸ್ ಪುಂಡರನ್ನು ಬಂಧಿಸುವಂತೆ ಘೋಷಣೆ ಕೂಗಿ ಬೆಳಗಾವಿ ಹಾಗೂ ಮಹಾರಾಷ್ಟ್ರದಲ್ಲಿನ ಕನ್ನಡಿಗರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿದರು.
ಈ ವೇಳೆ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ.ಮೂರ್ತಿ ಮಾತನಾಡಿ, ಎಂಇಎಸ್ ಪುಂಡರಿಗೆ ತಕ್ಕ ಪಾಠ ಕಲಿಸುತ್ತೇವೆ. ರಾಯಣ್ಣ ಪ್ರತಿಮೆಯನ್ನು ಬೆಳಗಾವಿಯಲ್ಲಿ ಮರು ಪ್ರತಿಷ್ಠಾಪನೆ ಮಾಡಬೇಕು. ಎಂಇಎಸ್ ಸಂಘಟನೆಯನ್ನು ಕರ್ನಾಟಕದಿಂದ ಗಡಿಪಾರು ಮಾಡಿ ತಕ್ಕ ಪಾಠ ಕಲಿಸಬೇಕು.
ಕೂಡಲೇ ಸಿಎಂ ಇದರ ಬಗ್ಗೆ ಎಚ್ಚರವಹಿಸಬೇಕು. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಇನ್ನೂ ಕೆಟ್ಟದಾಗಿರುತ್ತದೆ. ಇಂದು ಎಲ್ಲಾ ಸಂಘಟನೆಗಳು ಒಗ್ಗುಡ್ಡಿದ್ದು 'ಬೆಳಗಾವಿ ಚಾಲೋ' ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.
ಬಳಿಕ ಕುರುಬ ಸಮಾಜದ ಅಧ್ಯಕ್ಷ ಟಿ.ಬಿ.ಬಳಗಾವಿ ಮಾತನಾಡಿ, ಎಂಇಎಸ್ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸುವ ಕೆಲಸವನ್ನ ಸರ್ಕಾರ ಮಾಡಬೇಕು. ಕೂಡಲೇ ರಾಯಣ್ಣ ಪ್ರತಿಮೆಯನ್ನು ಬೆಳಗಾವಿಯಲ್ಲಿ ಪ್ರತಿಷ್ಠಾಪನೆ ಮಾಡಬೇಕು. ಸಿಎಂ ಬೊಮ್ಮಯಿ ಮೌನವಹಿಸದೆ ಎಂಇಎಸ್ ಸಂಘಟನೆಯನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ಭಗ್ನಗೊಂಡ ಸ್ಥಳದಲ್ಲೇ ಹೊಸ ಮೂರ್ತಿ ಪ್ರತಿಷ್ಠಾಪನೆ.. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಕ್ಷೀರಾಭಿಷೇಕ