ಬೆಂಗಳೂರು : ಜೂನ್ 16ರಿಂದಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಆರಂಭವಾಗಿದೆ. ಹಲವು ಆಸ್ಪತ್ರೆಗಳಲ್ಲಿ ಈಗಾಗಲೇ ಚಿಕಿತ್ಸೆ ಕೊಡುತ್ತಿದ್ದೇವೆ. ಕೆಲವೆಡೆ ತಕ್ಷಣಕ್ಕೆ ಚಿಕಿತ್ಸೆ ಕೊಡಲಾಗದೆ ಸಮಸ್ಯೆಯಾಗಿರೋದು ನಿಜ. ಇದಕ್ಕೆ ಕಾರಣ ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಕೊರತೆ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ. ರವೀಂದ್ರ ಹೇಳಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ನಂತರ ಮಾತನಾಡಿದ ಅವರು, ದಿಢೀರ್ ಸೋಂಕು ಏರಿಕೆ ಜೊತೆಗೆ ಸೌಲಭ್ಯ ಕೊರತೆಯ ಸಮಸ್ಯೆಯಿತ್ತು. ಕೊರೊನಾ ನಿಯಂತ್ರಣದಲ್ಲಿ ಖಾಸಗಿ ಆಸ್ಪತ್ರೆಗಳು ಸರ್ಕಾರದ ಬೆಂಬಲಕ್ಕೆ ಸದಾ ಇರುತ್ತವೆ ಎಂದು ಭರವಸೆ ನೀಡಿದರು.
ಖಾಸಗಿ ಆಸ್ಪತ್ರೆಗಳ ವೈದ್ಯ ಸಿಬ್ಬಂದಿಗೆ ವಿಮೆ ಸೌಲಭ್ಯ ಕೊಡಲು ಸರ್ಕಾರ ಒಪ್ಪಿದೆ ಎಂದ ಅವರು, ದರ ಪಟ್ಟಿ ನಿಗದಿ ಬಗ್ಗೆ ಮೂರು ಸುತ್ತಿನ ಸಭೆ ಆಗಿದೆ. ಮೂರು ಹಂತದ ಚಿಕಿತ್ಸಾ ದರಗಳಿವೆ. ಆಯುಷ್ಮಾನ್ ಭಾರತ ಯೋಜನೆಯಡಿ ಬರುವ ರೋಗಿಗಳಿಗೆ ನಿಯಮದಂತೆ ಕ್ರಮವಹಿಸಲಾಗಿದೆ. ಹಾಗೆಯೇ ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಒಂದು ದರ, ಉಳಿದ ರೋಗಿಗಳಿಗೆ ಮತ್ತೊಂದು ದರ ನಿಗದಿ ಮಾಡಲಾಗಿದೆ ಎಂದರು.
ಚಿಕಿತ್ಸೆಯ ದರ ನಿಗದಿಯಲ್ಲಿ ನಮ್ಮಿಂದ ಯಾವುದೇ ಆಕ್ಷೇಪಣೆಗಳು ಇಲ್ಲ. ಸರ್ಕಾರದ ಆದೇಶದಂತೆ ದರ ಅನುಕರಣೆ ಮಾಡುತ್ತೇವೆ. ಈ ಬಗ್ಗೆ ಸರ್ಕಾರ ನಮಗೆ ಸಂಪೂರ್ಣ ಸಹಕಾರ ಕೊಡುವುದಾಗಿ ಹೇಳಿದೆ ಎಂದು ತಿಳಿಸಿದರು.
ಭಯ ಬೇಡ: ಕೊರೊನೇತರ ರೋಗಿಗಳ ಜೊತೆ ಕೋವಿಡ್ ರೋಗಿಗಳನ್ನು ಸೇರಿಸುವುದಿಲ್ಲ. ಈಗ ನಾವು ಕೊಡುತ್ತಿರುವ 2,500 ಬೆಡ್‌ಗಳು ಕೋವಿಡ್ ರೋಗಿಗಳಿಗೆ ಮಾತ್ರ ನೀಡಲಾಗುತ್ತಿದೆ. ಬೇರೆ ರೋಗಿಗಳು ಆತಂಕ ಪಡುವ ಅಗತ್ಯ ಇಲ್ಲ. ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದರು.