ಬೆಂಗಳೂರು : ರಾಜಧಾನಿಯಲ್ಲಿ ಮಂಗಳಮುಖಿಯರ ಆಟಾಟೋಪ ಹೆಚ್ಚಾಗುತ್ತಿದೆ. ಕನಸಿನ ಮನೆ ಕಟ್ಟಿ ಗೃಹ ಪ್ರವೇಶ ಮಾಡುವಾಗಲೇ ಪ್ರವೇಶಿಸಿದ್ದ ಮೂವರು ಮಂಗಳಮುಖಿಯರು ಹೆಚ್ಚು ಹಣ ನೀಡುವಂತೆ ಪೀಡಿಸಿ ಅಸಭ್ಯವಾಗಿ ವರ್ತಿಸಿರುವ ಪ್ರಕರಣ ಸಂಬಂಧ ಮೂವರನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೃತಿಕಾ, ಪ್ರಶಾಂತ್ ಆಲಿಯಾಸ್ ಪ್ರೀತಿ ಹಾಗೂ ಮಣಿಕಂಠನ್ ಆಲಿಯಾಸ್ ಪೂಜಾ ಬಂಧಿತ ಮಂಗಳಮುಖಿಯರು. ಇವರೆಲ್ಲರೂ ಶ್ರೀರಾಮಪುರದಲ್ಲಿ ವಾಸವಿದ್ದರು.
ವೈಯಾಲಿಕಾವಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ರಾಜೇಶ್- ದೀಪಾ ದಂಪತಿ ಕಟ್ಟಿದ್ದ ನೂತನ ಮನೆಯ ಗೃಹಪ್ರವೇಶದ ಹಿನ್ನೆಲೆಯಲ್ಲಿ ಪೂಜಾ ಕಾರ್ಯಕ್ರಮ ನಡೆಯುತ್ತಿತ್ತು. ಆರೋಪಿಗಳ ಪೈಕಿ ಓರ್ವ ಮಂಗಳಮುಖಿ ಮನೆಗೆ ಆಗಮಿಸಿ ಹಣ ನೀಡುವಂತೆ ಕೇಳಿದ್ದಾಳೆ. ಮಾಲೀಕರು 200 ರೂಪಾಯಿ ಕೊಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಆಕೆ 200 ರೂಪಾಯಿ ಸಾಲುವುದಿಲ್ಲ, ಹೊರಗೆ ಮತ್ತಿಬ್ಬರಿದ್ದಾರೆ. ಹೆಚ್ಚು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ.
ಸತತ ಮಾತುಕತೆಯ ಬಳಿಕ ಮನೆಯವರು 5 ಸಾವಿರ ರೂ ನೀಡಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಮಂಗಳಮುಖಿಯರು ಓರ್ವಳಿಗೆ 5 ಸಾವಿರದಂತೆ ಒಟ್ಟು 15 ಸಾವಿರ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರು ಹಾಗೂ ಮಂಗಳಮುಖಿಯರೊಂದಿಗೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಧರಿಸಿದ್ದ ಬಟ್ಟೆ ಎತ್ತಿ ಅನುಚಿತ ವರ್ತನೆ ತೋರಿ ಅವಾಚ್ಯ ಶಬ್ಧಗಳಿಂದಲೂ ನಿಂದಿಸಿದ್ದರು.
ಈ ಘಟನೆಯ ಕುರಿತು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಪ್ರತಿಕ್ರಿಯಿಸಿ, "ಗೃಹ ಪ್ರವೇಶ ನಡೆಯುವಾಗ ಮೂವರು ಮಂಗಳಾಮುಖಿಯರು ಬಂದು ಹಣಕ್ಕೆ ಡಿಮ್ಯಾಂಡ್ ಮಾಡಿ ಪುಂಡಾಟಿಕೆ ಮೆರೆದಿದ್ದರು. ಘಟನೆ ಕುರಿತು ಮನೆಯವರು ನೀಡಿದ ದೂರಿನ ಮೇರೆಗೆ ಮೂವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ" ಎಂದರು.
ಇದನ್ನೂ ಓದಿ: Bengaluru crime: ಬಾಡಿಗೆ ಮನೆ ಮಾಲೀಕರ ಚಿನ್ನಾಭರಣ ದೋಚಿದ ಲಿವಿಂಗ್ ಟುಗೆದರ್ ಜೋಡಿ ಅಂದರ್
ಈ ಹಿಂದೆ ಘಟನೆಯ ಬಗ್ಗೆ ಮನೆ ಮಾಲೀಕ ರಾಜೇಶ್ ಪ್ರತಿಕ್ರಿಯಿಸಿ, "ಗೃಹ ಪ್ರವೇಶದ ಪೂಜೆ ನಡೆಯುವಾಗ ಮನೆಗೆ ಮಂಗಳಾಮುಖಿಯರು ಬಂದಿದ್ದರು. 200 ರೂಪಾಯಿ ಕೊಟ್ಟೆ. ನನಗೆ ಅದರಿಂದ ಮುಖಕ್ಕೆ ಆರತಿ ರೀತಿ ಮಾಡಿ ಜೇಬಲ್ಲಿ ಹಣವಿಟ್ಟರು. ನಂತರ ಹತ್ತು ಸಾವಿರ ಹಣ ಕೊಡುವಂತೆ ಬಾಯಿಗೆ ಬಂದಂತೆ ಬೈದು ಬಟ್ಟೆ ಬಿಚ್ಚಲು ಮುಂದಾದರು. ಇನ್ನೂ ಹೊರಗಿದ್ದಾರೆ, ಅವರಿಗೆ 20,000 ಕೊಡಬೇಕು ಎಂದು ಗಲಾಟೆ ಮಾಡಿದರು. ಕುಟುಂಬಸ್ಥರ ಮುಂದೆ ನಮಗೆ ತಲೆ ತಗ್ಗಿಸುವಂತಾಯಿತು" ಎಂದು ಬೇಸರ ವ್ಯಕ್ತಪಡಿಸಿದರು.
ಮುಂದುವರೆದು, "ಬಳಿಕ ಮನೆಯವರೆಲ್ಲ ಸೇರಿ ನನ್ನನ್ನು ರೂಮಿಗೆ ಕಳುಹಿಸಿದರು. ನಮ್ಮ ಮನೆಗೆ ಬಂದ ನೆಂಟರು ಐದು ಸಾವಿರ ಕೊಟ್ಟು ಕಳುಹಿಸಿದ್ದಾರೆ. ಲೋನ್ ಪಡೆದು ಒಂದು ವರ್ಷದಿಂದ ಮನೆ ಕಟ್ಟಿದ್ದೇವೆ. ಆದರೆ ಈ ರೀತಿ ಆಗಿರೋದು ತುಂಬಾ ನೋವಾಗಿದೆ" ಎಂದು ಅಳಲು ತೋಡಿಕೊಂಡಿದ್ದರು.
ಇದನ್ನೂ ಓದಿ: ಶಿವಮೊಗ್ಗದ ಒಂಟಿ ಮಹಿಳೆ ಕೊಲೆ ಪ್ರಕರಣ: ಮನೆಯ ಕಾರು ಚಾಲಕ ಸೇರಿ 7 ಆರೋಪಿಗಳ ಬಂಧನ