ಬೆಂಗಳೂರು : ಕಳೆದ ಐದಾರು ತಿಂಗಳಿಂದ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸುವ ಕೆಲಸ ನಡೀತಿದೆ. ಒಂದು ವೇಳೆ ಬಿಎಸ್‌ವೈ ಇಳಿದ್ರೆ ಅದು ಕಾಂಗ್ರೆಸ್‌ಗೆ ಲಾಭ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಬಿಜೆಪಿಗೆ ಮೋದಿ ಹೇಗೋ, ಹಾಗೆ ಕರ್ನಾಟಕಕ್ಕೆ ಯಡಿಯೂರಪ್ಪ. ಬಿಎಸ್‌ವೈ ಅವರನ್ನು ಅಧಿಕಾರದಿಂದ ಇಳಿಸಿದ್ರೆ, ಮತ್ತೆ ನಲವತ್ತು ಸೀಟ್‌ಗೆ ಬಂದು ಇಳಿಯುತ್ತೆ. ಬಿಜೆಪಿಯಲ್ಲಿ ಗುಂಪುಗಾರಿಕೆ ಜಾಸ್ತಿ ಇದೆ. ಎಲ್ಲಾ ಪಕ್ಷಗಳಿಗೆ ಹೋಲಿಸಿದ್ರೆ ಬಿಜೆಪಿಯಲ್ಲೇ ಹೆಚ್ಚು ಬಣ ರಾಜಕೀಯ ಇರೋದು. ಅವರ ಕಿತ್ತಾಟಗಳೇ ಸರ್ಕಾರ ಹಾಗೂ ಪಕ್ಷಕ್ಕೆ ಮುಳುವಾಗುತ್ತೆ ಎಂದರು.
ಡಿಕೆಶಿ ಮೀರ್ ಸಾಧಿಕ್ ರೀತಿ ಎಂಬ ಡಿಸಿಎಂ ಅಶ್ವತ್ಥ್ ನಾರಾಯಣ್ ಆರೋಪಕ್ಕೆ ಪ್ರತಿಕ್ರಿಯಿಸಿ, ಸಮ್ಮಿಶ್ರ ಸರ್ಕಾರವನ್ನು ಯಾರು ಬೀಳಿಸಿದರು ಅನ್ನುವ ಮಾಹಿತಿ ನನ್ನಲ್ಲಿದೆ. ನಾನು ಕೂಡ ಆ ಸಂದರ್ಭದಲ್ಲಿ ಸಕ್ರೀಯವಾಗಿದ್ದೆ, ಸರ್ಕಾರ ಹೇಗೆ ಬಿತ್ತು ಎನ್ನುವ ಸಂಪೂರ್ಣ ಮಾಹಿತಿ ನನ್ನಲ್ಲಿದೆ.
ಮೀರ್ ಸಾಧಿಕ್ ಅಂತಾ ಅಶ್ವತ್ಥ್ ನಾರಾಯಣ್ ಬಳಸಿದ್ದಾರೆ. ಆ ರೀತಿ ಮಾತನಾಡಬಾರದು. ನಮ್ಮವರು ಕೂಡ ಇಂಥ ಪದ ಬಳಕೆ ಮಾಡಿದ್ರೆ ಶೋಭೆ ತರಲ್ಲ. ಸಮ್ಮಿಶ್ರ ಸರ್ಕಾರ ಉಳಿಸುವುದಕ್ಕೆ ಡಿಕೆಶಿ ಶ್ರಮ ಹಾಕಿದ್ರು. ಅವರು ಸರ್ಕಾರದ ಪರವಾಗಿಯೇ ಇದ್ದರು. ಡಿಕೆಶಿಗೆ ಮೀರ್ ಸಾಧಿಕ್ ಅಂತಾ ಬಳಸಿದ್ದು ತಪ್ಪು ಎಂದರು.
ಮೋದಿ ದೇಶ ಉದ್ದೇಶಿಸಿ ಮಾತನಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಮೋದಿಯಿಂದ ಏನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯ ಇಲ್ಲ. ಜನವರಿಯಲ್ಲಿ ಕೊರೊನಾ ಬಂತು. ಟ್ರಂಪ್ ಬಂದು ಹೋಗುವವರೆಗೂ ಕಾದರು. ಮಾರ್ಚ್ ಎಂಡ್‌ಗೆ ಲಾಕ್‌ಡೌನ್ ಮಾಡಿದ್ರು. ಆಗ ದೇಶದಲ್ಲಿ ಕೊರೊನಾ ಉಲ್ಟಾ ಆಯ್ತು. ಇವತ್ತು ಕೊರೊನಾವನ್ನು ಕಂಟ್ರೋಲ್ ಮಾಡುವುದಕ್ಕೆ ಆಗ್ತಿಲ್ಲ ಎಂದರು.