ಬೆಂಗಳೂರು : ನಗರದ ವಿದ್ಯುತ್ ಚಿತಾಗಾರಗಳ ಮೇಲಿನ ಒತ್ತಡ ಕಡಿಮೆ ಮಾಡಲು ನಗರ ಜಿಲ್ಲಾಡಳಿತ ತಾವರಕೆರೆ, ಗಿಡ್ಡೇನಹಳ್ಳಿ ಹಾಗೂ ಚಾಮರಾಜಪೇಟೆಯ ಟಿ.ಆರ್.ಮಿಲ್ ನಿಗದಿತ ಜಾಗಗಳಲ್ಲಿ ಸಾಮೂಹಿಕ ಅಂತ್ಯ ಸಂಸ್ಕಾರಕ್ಕಾಗಿ ವ್ಯವಸ್ಥೆ ಮಾಡಿದೆ.
ಜನತಾ ಕರ್ಫ್ಯೂ ಹಾಗೂ ಲಾಕ್ಡೌನ್ನಿಂದಾಗಿ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾದರೂ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ಸಕಾಲಕ್ಕೆ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪುವವರ ಸಂಖ್ಯೆಯೇ ಅಧಿಕವಾಗಿದೆ.
ಇನ್ನೊಂದೆಡೆ ಮೃತದೇಹ ಸಾಗಿಸಲು ಆ್ಯಂಬುಲೆನ್ಸ್ ಕೊರತೆಯಾದರೆ ಮತ್ತೊಂದೆಡೆ ಶವ ಸುಡಲು ಚಿತಾಗಾರಗಳ ಮುಂದೆ ಗಂಟೆಗಟ್ಟಲೇ ಕ್ಯೂ ನಿಲ್ಲಬೇಕಾದ ಪರಿಸ್ಥಿತಿಯಿದೆ. ಹಾಗಾಗಿ ನಗರ ಜಿಲ್ಲಾಡಳಿತ ನಿಗದಿತ ಜಾಗಗಳಲ್ಲಿ ಸಾಮೂಹಿಕ ಅಂತ್ಯ ಸಂಸ್ಕಾರಕ್ಕಾಗಿ ವ್ಯವಸ್ಥೆ ಮಾಡಿದೆ.
ದಿನೇದಿನೆ ನೂರಾರು ಸಂಖ್ಯೆಯಲ್ಲಿ ಕೊರೊನಾದಿಂದ ಮೃತಪಡುತ್ತಿರುವುದರಿಂದ ಶವಗಳನ್ನ ಸುಡಲು ಕಟ್ಟಿಗೆ ಕೊರತೆ ಬಾರದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ತಾವರೆಕೆರೆ ಹಾಗೂ ಗಿಡ್ಡೇನಹಳ್ಳಿಯಲ್ಲಿ ತಲಾ 50 ರಂತೆ ಒಟ್ಟು 100 ಶವ ಸುಡುವ ಸಾಮರ್ಥ್ಯವಿದೆ.
ಪ್ರತಿ ದಿನ ಎರಡು ಕಡೆ 150ಕ್ಕೂ ಹೆಚ್ಚು ಶವಗಳನ್ನು ಸುಡಲಾಗುತ್ತಿದೆ. ಧಾರ್ಮಿಕ ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಸಲು ಕಟ್ಟಿಗೆ ಸೇರಿದಂತೆ ಬೇಕಾದ ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದೆ.
1200ಕ್ಕೂ ಹೆಚ್ಚು ಟನ್ ಕಟ್ಟಿಗೆ ಸಂಗ್ರಹ : ನಗರದಲ್ಲಿ ನಿರ್ಮಾಣಗೊಂಡಿರುವ ಎರಡು ತಾತ್ಕಾಲಿಕ ಚಿತಾಗಾರದಲ್ಲಿ ಸೌಧೆ ಕೊರತೆ ಕಂಡುಬಂದಿತ್ತು. ಸಂಪೂರ್ಣವಾಗಿ ಒಂದು ಶವ ಸುಡಲು 1,300ರಿಂದ 1,500 ಕೆ.ಜಿ. ಕಟ್ಟಿಗೆ ಬೇಕಿದೆ. ಆದರೆ ಬೇಕಾದ ಕಟ್ಟಿಗೆ ಕೊರತೆ ಇದ್ದು, ಸದ್ಯ ಪರಿಸ್ಥಿತಿ ಕೊಂಚ ಬಿಗಾಡಿಯಿಸಿದೆ.
ಅಂತ್ಯಕ್ರಿಯೆ ವೇಳೆ ಯಾವುದೇ ಕಟ್ಟಿಗೆ ಕೊರತೆ ಎದುರಾಗದಂತೆ ಎಚ್ಚರವಹಿಸಲು ಜಿಲ್ಲಾಡಳಿತ ಬೇರೆ ಬೇರೆ ಮೂಲಗಳಿಂದ ಸೌಧೆ ಸಂಗ್ರಹಿಸಿಕೊಂಡಿದೆ. ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕಟ್ಟಿಗೆ ಸಂಗ್ರಹಿಸುವ ಡಿಪೊಗಳಿವೆ. ಕಟ್ಟಿಗೆಗಳನ್ನು ಸಂಗ್ರಹಿಸಿ ತುರ್ತು ಸಂದರ್ಭಗಳಲ್ಲಿ ನೀಡುವುದಕ್ಕಾಗಿ 21 ಮಂದಿ ಗುತ್ತಿಗೆದಾರರಿದ್ದಾರೆ.
ರಸ್ತೆ ಅಗಲೀಕರಣ ಹಾಗೂ ಅಪಾಯಕಾರಿ ಹಾಗೂ ಒಣಗಿದ ಮರಗಳನ್ನು ಕಡಿದು ಹಾಕಿ ಅದನ್ನು ಟಿಂಬರ್ ರೂಪದಲ್ಲಿ ಕಟ್ಟಿಗೆಯನ್ನು ಬಿಬಿಎಂಪಿ ಅರಣ್ಯ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಹೆಚ್ಚುವರಿಯಾಗಿ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ಅಭಿವೃದ್ದಿ ನಿಗಮದಿಂದ ಸರ್ಕಾರಿ ಜಾಗದಲ್ಲಿ ಬೆಳೆಸಿರುವ ಜಾಗದಲ್ಲಿ ನಿಷೇಧಿತ ನೀಲಗಿರಿ ಹಾಗೂ ಆಕೇಷಿಯಾ ಮರಗಳನ್ನು ಕಡಿದು ಸರ್ಕಾರಿ ದರದಲ್ಲಿ ಸಮಾರು 30 ಟನ್ ಸೌಧೆ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 700 ಟನ್ ಕಟ್ಟಿಗೆ ಸಂಗ್ರಹಿಸಿ ಇಡಲಾಗಿದೆ. ಸ್ಥಳೀಯ ಗುತ್ತಿಗೆದಾರರ ಮೂಲಕ ಸಾಧ್ಯವಾದಷ್ಟು ಹೆಚ್ಚಿನ ಕಟ್ಟಿಗೆ ದಾಸ್ತಾನು ಮಾಡಲಾಗಿದ್ದು ಇದುವರೆಗೂ ಸುಮಾರು ಬೆಂಗಳೂರು ನಗರ ಹಾಗೂ ಜಿಲ್ಲೆಯಲ್ಲಿ 1,200ಕ್ಕೂ ಹೆಚ್ಚು ಟನ್ ಕಟ್ಟಿಗೆ ಸಂಗ್ರಹಿಸಿರುವುದಾಗಿ ನಗರ ಜಿಲ್ಲಾಧಿಕಾರಿ ಮಂಜುನಾಥ್ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಅಸ್ಥಿ ಅದಲು ಬದಲು ಆಗೋಕೆ ಚಾನ್ಸ್ ಇಲ್ಲ: ತಾವರೆಕರೆ ಹಾಗೂ ಗಿಡ್ಡೇನಹಳ್ಳಿ ಚಿತಾಗಾರದಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಾಮೂಹಿಕ ಅಂತ್ಯ ಸಂಸ್ಕಾರ ವೇಳೆ ಅಸ್ಥಿ ಅದಲು ಬದಲು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದನ್ನು ವ್ಯವಸ್ಥಿತವಾಗಿ ನಿಯಂತ್ರಿಸಲು ಟೋಕನ್ ಪದ್ಧತಿ ಜಾರಿಗೆ ತಂದಿದೆ.
ಅಂತ್ಯಸಂಸ್ಕಾರವಾಗುವ ಪ್ರತಿಯೊಂದಕ್ಕೂ ಟೋಕನ್ ನೀಡಲಾಗುತ್ತಿದ್ದು ಶವ ಸುಟ್ಟು ಬೂದಿಯಾದ ಬಳಿಕ ಅಸ್ಥಿಯನ್ನು ನಿರ್ದಿಷ್ಟ ಮಡಿಕೆ ಮೇಲೆಯೂ ಮೃತರ ಹೆಸರು ಹಾಗೂ ಟೋಕನ್ ನಂಬರ್ ನಮೂದಿಸಿ ಮೃತರ ಕುಟುಂಬಸ್ಥರಿಗೆ ಕೊಡಲಾಗುತ್ತಿದೆ.
ಧಾರ್ಮಿಕ ವಿಧಿವಿಧಾನದಂತೆ ಪ್ರತಿಯೊಂದು ಅಂತ್ಯ ಸಂಸ್ಕಾರಕ್ಕಾಗಿ ನಿಗಧಿತ ಪ್ರಮಾಣದಲ್ಲಿ 1,300 ಕೆ.ಜಿ.ಕಟ್ಟಿಗೆ, 250 ಗ್ರಾಂ ಕರ್ಪೂರ, 5 ಲೀಟರ್ ಡೀಸೆಲ್, 5 ಕೆ.ಜಿ.ತುಪ್ಪ ಹಾಗೂ ಸಕ್ಕರೆ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನೇಕಲ್ ಬಳಿ ಶೀಘ್ರದಲ್ಲೇ ಮತ್ತೊಂದು ಚಿತಾಗಾರ ನಿರ್ಮಾಣ : ತಾತ್ಕಾಲಿಕವಾಗಿ ನಿರ್ಮಾಣಗೊಂಡಿರುವ ತಾವರೆಕೆರೆ ಹಾಗೂ ಗಿಡ್ಡೇನಹಳ್ಳಿಯಲ್ಲಿ ಚಿತಾಗಾರಗಳ ಮೇಲಿನ ಒತ್ತಡ ತಗ್ಗಿಸಲು ಆನೇಕಲ್ ಬಳಿ ಮತ್ತೊಂದು ಚಿತಾಗಾರ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಈಗಾಗಲೇ ಆನೇಕಲ್ ಸಮೀಪ ನಿರ್ದಿಷ್ಟ ಜಾಗವನ್ನು ಗುರುತಿಸಲಾಗಿದ್ದು ಸುಮಾರು 20ಕ್ಕೂ ಹೆಚ್ಚು ಶವ ಸುಡಬಹುದಾಗಿದೆ. ಜಿಲ್ಲಾಡಳಿತವು ಬೇಕಾದ ಸಿದ್ದತೆ ನಡೆಸಲಾಗುತ್ತಿದ್ದು ಶೀಘ್ರದಲ್ಲೇ ಚಿತಾಗಾರ ನಿರ್ಮಾಣವಾಗಲಿದೆ.