ಬೆಂಗಳೂರು: ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ನ್ನು ಮಾರ್ಚ್ 4 ರಂದು ಮಂಡಿಸಲಿದ್ದು, ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವರೆಂಬ ನಿರೀಕ್ಷೆಯಲ್ಲಿ ರಾಜ್ಯದ ಜನತೆ ಎದುರು ನೋಡುತ್ತಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡುವಂತೆ ರೈತರು ಸೇರಿದಂತೆ ಹಲವು ಕಡೆಗಳಿಂದ ಬೇಡಿಕೆಗಳು ಬಂದಿವೆ. ಬೆಳೆಗೆ ನಿರ್ದಿಷ್ಟ ಬೆಲೆ, ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಮಣ್ಣಿನ ಫಲವತ್ತತೆ ಹೆಚ್ಚಿಸಲು ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ ಸಮರ್ಪಕ ವಿತರಣೆ, ಪ್ರತಿ ಗ್ರಾಮಕ್ಕೂ ಸಬ್ಸಿಡಿ ದರದಲ್ಲಿ ಒಕ್ಕಣೆ ಯಂತ್ರ ಹಾಗೂ ಎರೆಹುಳು ಗೊಬ್ಬರ ತಯಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕೃಷಿ ಕ್ಷೇತ್ರವು ರಾಜ್ಯದ ಜಿಡಿಪಿಗೆ ಶೇ. 17 ರಷ್ಟು ಕೊಡುಗೆ ನೀಡುತ್ತದೆ. ಕೈಗಾರಿಕೆಗಳು ಬಹುತೇಕ ಕಚ್ಚಾ ವಸ್ತುಗಳಿಗೆ ಕೃಷಿಯನ್ನೇ ಅವಲಂಬಿಸಿರುತ್ತವೆ. ರಾಜಸ್ಥಾನದ ನಂತರ ಅತೀ ಹೆಚ್ಚು ಒಣಭೂಮಿ ಕರ್ನಾಟಕ ಹೊಂದಿದೆ. ಪದೇ ಪದೆ ಮರುಕಳಿಸುತ್ತಿರುವ ಬರಗಾಲಕ್ಕೆ ರಾಜ್ಯ ತುತ್ತಾಗುತ್ತಿದ್ದು, 2020-21 ಹಾಗೂ 2021-22 ರಲ್ಲಿ ಉತ್ತಮ ಬೆಳೆ ಬಂದಿದ್ದರೂ ಅತಿ ಹೆಚ್ಚು ಅಕಾಲಿಕ ಮಳೆಯಿಂದ ಬೆಳೆಯನ್ನು ಕಟಾವು ಮಾಡಲಾಗದೇ ರೈತರು ನಷ್ಟ ಅನುಭವಿಸಿದ್ದಾರೆ.
ರಾಜ್ಯದಲ್ಲಿ 2020-21 ರಲ್ಲಿ 155 ಲಕ್ಷ ಟನ್ ಆಹಾರ ಉತ್ಪಾದನೆ: 2020 -21ರಲ್ಲಿ 155ಟನ್ ಆಹಾರ ಉತ್ಪಾದನೆ ಮಾಡಲಾಗಿದೆ. ಇದು 2019-20 ನೇ ಸಾಲಿಗಿಂತ ಶೇ. 10 ರಷ್ಟು ಹೆಚ್ಚು. ಆದರೆ, ಅಕಾಲಿಕ ಮಳೆಯಿಂದಾದ ಅನಾಹುತಕ್ಕೆ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖಾ ಸಿಬ್ಬಂದಿ ಮೂಲಕ ಸಮೀಕ್ಷೆ ಮಾಡಿಸಿದೆ. ಬೆಳೆಹಾನಿ ಅಂದಾಜಿಸಿ ರೈತರ ಬೆಳೆವಾರು ಕ್ಷೇತ್ರವನ್ನು ಫೂಟ್ಸ್ ಆ್ಯಪ್‌ನಲ್ಲಿ ನಮೂದಾದ ಪ್ರಕಾರ ಎನ್ಡಿಆರ್ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮಾವಳಿಯಂತೆ ಪರಿಹಾರ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ. ಪ್ರಸ್ತುತ ಪರಿಹಾರ ಮೊತ್ತವು ರೈತರು ಬೆಳೆದ ಬೆಳೆಗಳ ಸಂಪೂರ್ಣ ಹಾನಿ ಭರಿಸದ ಕಾರಣಕ್ಕೆ ಸರ್ಕಾರ ಇನ್ನೂ ಹೆಚ್ಚಿನ ಪರಿಹಾರ ಒದಗಿಸಲು ನೂತನ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ.
ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ಸರ್ಕಾರದ ಮುಂದಿರುವ ಗುರಿ ಏನು: ಕೃಷಿಯನ್ನು ಮುಂದಿನ ದಿನಗಳಲ್ಲಿ ಲಾಭದಾಯಕ ಉದ್ಯಮವಾಗಿ ಮಾಡಲು ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮುಖ್ಯವಾಗಿ, ಮಣ್ಣಿನಲ್ಲಿ ಸಾವಯವ ಇಂಗಾಲದ ಮಟ್ಟ ಹೆಚ್ಚಿಸುವುದು, ಹನಿ ನೀರಾವರಿ, ಸಂರಕ್ಷಿತ ಕೃಷಿ ಕ್ಷೇತ್ರವನ್ನು ಹೆಚ್ಚಿಸುವುದು, ಸಮಗ್ರ ಕೃಷಿ ಪದ್ಧತಿ ಅಳವಡಿಸಿ ಕೃಷಿಸಾಲ ನೀಡಿಕೆ ಕ್ರಮಗಳನ್ನು ಸರಳೀಕರಣಗೊಳಿಸುವುದು, ಆಹಾರ ಸಂಸ್ಕರಣೆಗೆ ಒತ್ತು ನೀಡುವುದು, ಕೃಷಿ ಉತ್ಪನ್ನಗಳ ರಪ್ತಿಗೆ ಉತ್ತೇಜನ ನೀಡಬೇಕು.
ಕೃಷಿ, ಅರಣ್ಯ, ತೋಟಗಾರಿಕೆ, ಹೈನುಗಾರಿಕೆ ಹಾಗೂ ರೇಷ್ಮೆ ಕೃಷಿಗೆ ಉತ್ತೇಜನ ನೀಡುವುದು, ಗ್ರಾಮೀಣ ಭಾಗದಲ್ಲಿ ಕೃಷಿಸಂತೆಗಾಗಿ ಕೃಷಿ ಮಾರುಕಟ್ಟೆ ಪ್ರಾಂಗಣ ಕಟ್ಟಿಸುವುದು, ಸಂಗ್ರಹಣಾ ಗೋದಾಮುಗಳನ್ನು ನಿರ್ಮಾಣ ಮಾಡುವುದು, ಕೃಷಿಯಲ್ಲಿ ಆಧುನಿಕ ಯಂತ್ರಗಳನ್ನು ಸಣ್ಣ ರೈತರಿಗಾಗಿ ಅಭಿವೃದ್ಧಿ ಪಡಿಸುವುದರ ಮೂಲಕ ಅದನ್ನು ಬಳಸಿಕೊಳ್ಳಬೇಕು. ಕೃಷಿ ನವೋದ್ಯಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಿ ಕೃಷಿಯನ್ನು ಲಾಭದಾಯಕವಾಗುವಂತೆ ಮಾಡಿ ಕೃಷಿಕರ ಆದಾಯ ಹೆಚ್ಚಿಸುವುದು ಸರ್ಕಾರದ ಮುಖ್ಯಗುರಿ.
ಅಗ್ರಿ ಟೂರಿಸಂ ಕೇಂದ್ರ ಯೋಜನೆ: ಕೃಷಿ ಬಲವರ್ಧನೆ, ಕೃಷಿಕರ ಆದಾಯ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಈ ಸಾಲಿನ ಬಜೆಟ್ ನಲ್ಲಿ ಕೆಲವು ಕಾರ್ಯಕ್ರಮ ರೂಪಿಸುವ ಅಗತ್ಯತೆ ಇದೆ. ರಾಜ್ಯದಲ್ಲಿ ಈಗಾಗಲೇ 55 ಲಕ್ಷ ಹೆಕ್ಟೇರ್ ಭೂಮಿಯನ್ನು ತಂತ್ರಜ್ಞಾನಗಳಿಗೆ ಜಲಾನಯನ ಅಭಿವೃದ್ಧಿ ಒಳಪಡಿಸಲಾಗಿದೆ. ಇನ್ನುಳಿದ 50 ಲಕ್ಷ ಹೆಕ್ಟೇರ್ ಭೂಮಿಗೆ ಜಲಾನಯನ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿ ಹೆಚ್ಚಿನ ಅನುದಾನ ನೀಡಬೇಕು. 2020ರಲ್ಲಿ ಘೋಷಿಸಿದ ರಾಜ್ಯದ ಪ್ರವಾಸೋದ್ಯಮ ನೀತಿ ಅನ್ವಯ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಲಭ್ಯವಿರುವ ಕೃಷಿ, ತೋಟಗಾರಿಕೆ ಕ್ಷೇತ್ರಗಳು ಹಾಗೂ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ 'ಅಗ್ರಿ ಟೂರಿಸಂ ಕೇಂದ್ರ'ಗಳನ್ನು ಸ್ಥಾಪಿಸಬೇಕು.
ಈ ಕೇಂದ್ರಗಳ ನಿರೀಕ್ಷೆ ನಿರ್ವಹಣೆ ಮಾಡಲು ಹೊರಗುತ್ತಿಗೆ ಆಧಾರದ ಮೇಲೆ ನಿರುದ್ಯೋಗಿ ಕೃಷಿ ಪದವೀಧರರಿಗೆ ಅಥವಾ ಖಾಸಗಿ ಸಂಸ್ಥೆಗಳಿಗೆ ಪಿಪಿಪಿ ಮಾದರಿಯಲ್ಲಿ ನಿರ್ದಿಷ್ಟ ಅವಧಿಗೆ ಕಾರ್ಯನಿರ್ವಹಿಸುವಂತೆ ಕಾರ್ಯಕ್ರಮ ರೂಪಿಸಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದ ಕೃಷಿ ಅಭಿವೃದ್ಧಿಗೆ ಕೃಷಿ ಪರಿಕರಗಳ ಪೂರೈಕೆ, ಆಹಾರ ಉತ್ಪಾದನೆ, ಆಹಾರ ಸಂಸ್ಕರಣೆ, ಅಹಾರ ರಫ್ತು, ಸುಲಭ ಬಡ್ಡಿ ದರದಲ್ಲಿ ಕೃಷಿ ಸಾಲ, ಇ-ಮಾರುಕಟ್ಟೆ, ಭೂಮಿ ಫಲವತ್ತತೆ ಹಾಗೂ ಉತ್ಪಾದಕತೆಯನ್ನು ವೃದ್ಧಿಸುವ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ಹಾಗೂ ಪಾರದರ್ಶಕವಾಗಿ ಅನುಷ್ಠಾನಗೊಳಿಸಬೇಕಿದೆ.
ಖಾಲಿ ಹುದ್ದೆ ಭರ್ತಿಗೆ ಮಹತ್ವ ದೊರೆಯುವುದೇ?: ರಾಜ್ಯದ ಆರು ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಶೇ. 50 ಹುದ್ದೆಗಳನ್ನು ತುಂಬಲು ಸರ್ಕಾರ ಅನುಮತಿ ನೀಡಿ ಭರ್ತಿ ಮಾಡಿದರೆ, ಮಾನವ ಸಂಪನ್ಮೂಲ ಕೊರತೆಯನ್ನು ಸ್ವಲ್ಪಮಟ್ಟಿಗೆ ನಿವಾರಿಸಿದರೆ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆ ಗುಣಮಟ್ಟ ಹೆಚ್ಚಿಸಲು ಪೂರಕವಾಗುತ್ತದೆ. ರಾಜ್ಯದಲ್ಲಿ ಸುಮಾರು 6000 ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ 2 ಗ್ರಾಮ ಪಂಚಾಯತಿಗೆ ಒಬ್ಬರಂತೆ ಕೃಷಿ ಸಹಾಯಕರಾಗಿ ಕೆಲಸ ಮಾಡಲು ಅಂದಾಜು 3 ಸಾವಿರ ರೈತಮಿತ್ರ, ಕೃಷಿ ಮಿತ್ರರೆಂದು ನೂತನವಾಗಿ ಇಲಾಖೆಯ ವೃಂದ ಮತ್ತು ನೇಮಕಾತಿಯಲ್ಲಿ ಹುದ್ದೆಗಳನ್ನು ಸೃಜಿಸಿ ಕೃಷಿ ಪದವಿ ಅಥವಾ ಕೃಷಿ ಡಿಪ್ಲೋಮಾ ಪದವೀಧರರನ್ನು ನೇಮಕ ಮಾಡುವುದು ಸೂಕ್ತವಾಗಿದೆ.
ಸಿರಿಧಾನ್ಯ ಮೇಳ: ಅಂತರರಾಷ್ಟ್ರೀಯ ಸಾವಯವ ಹಾಗೂ ಸಿರಿಧಾನ್ಯಗಳ ಮೇಳ ಆಯೋಜಿಸುವುದು, ರಾಜ್ಯದಲ್ಲಿ ರೈತರು ಬೆಳೆದ ಸಿರಿಧಾನ್ಯಗಳನ್ನು ಯೋಗ್ಯ ಬೆಲೆಯಲ್ಲಿ ಖರೀದಿಸಿ, ಶೇಖರಿಸಿ ಸಂಸ್ಕರಿಸಲು ಪ್ರಾಂತೀಯ ಸಾವಯವ ಒಕ್ಕೂಟಗಳಿಗೆ ಹಣಕಾಸಿನ ನೆರವು ನೀಡುವುದು. ಇದರ ಮೂಲಕ ರಾಜ್ಯದ ವಿವಿಧ- ಒಕ್ಕೂಟಗಳು ಖರೀದಿಸಿದ ಸಿರಿಧಾನ್ಯಗಳನ್ನು ಆಧುನಿಕ ಯಂತ್ರ ಬಳಸಿ ಸಂಸ್ಕರಿಸಿ ಬ್ಯಾಂಡ್ ಮಾಡಿ ರಫ್ತು ಮಾಡಲು ಕಾರ್ಯಕ್ರಮ ರೂಪಿಸಬೇಕು. ಕೃಷಿ ನವೋದ್ಯಮ ನೀತಿಯನ್ನು ಜಾರಿಗೆ ತಂದರೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕೃಷಿ ವಿಶ್ವವಿದ್ಯಾಲಯ ಮತ್ತು ಸರ್ಕಾರದಿಂದ ಅನುದಾನ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಗ್ರಿ ಇನ್‌ಕ್ಯೂಬೇಷನ್ ಕೇಂದ್ರಗಳನ್ನು ಆರಂಭಿಸಿ ಕೃಷಿ ನವೋದ್ಯಮಗಳನ್ನು ಪ್ರಾರಂಭಿಸುವವರಿಗೆ ಮಾಹಿತಿ ನೀಡಬೇಕು.
ಸಮಗ್ರ ಕೃಷಿಗೆ ಅನುದಾನ ಸಹಕಾರ: ಸಮಗ್ರ ಕೃಷಿ ಪದ್ಧತಿ ಅಳವಡಿಸಲು ಈಗಿರುವ ಕೇಂದ್ರ ಸರ್ಕಾರದ ಶೇ.50 ಅನುದಾನದೊಂದಿಗೆ ರಾಜ್ಯ ಸರ್ಕಾರ ಶೇ.30 ರಷ್ಟು ಹೆಚ್ಚುವರಿ ಅನುದಾನ ನೀಡಿ ರಿಯಾಯಿತಿ ದರದಲ್ಲಿ ರೈತರಿಂದ ಬೇಡಿಕೆ ಇರುವ ಪರಿಕರಗಳಿಗೆ ಮಾತ್ರ ಸಹಾಯಧನ ನೀಡಿದಲ್ಲಿ ಹಾಗೂ ಫಲಾನುಭವಿಗಳಿಗೆ ಕನಿಷ್ಠ 2 ಲಕ್ಷ ರೂ. ಪ್ರೋತ್ಸಾಹಧನ ನೀಡುವ ಕಾರ್ಯಕ್ರಮ ಹಾಕಿಕೊಳ್ಳಬೇಕು. ರಾಜ್ಯದಲ್ಲಿ ವಿಶೇಷವಾಗಿ ಆಹಾರ ಸಂಸ್ಕರಣಾ ನಿರ್ದೇಶನಾಲಯ ಸ್ಥಾಪಿಸಿ ಈ ಮೂಲಕ ಆಹಾರ ಪಾರ್ಕ್‌ಗಳನ್ನು ಬಲವರ್ಧನೆಗೊಳಿಸಿ ಆಹಾರ ಸಾಗಾಣಿಕೆಗೆ ಸೂಕ್ತ ಲಾಜಿಸ್ಟಿಕ್ ಒದಗಿಸುವ ವಿಶೇಷ ಯೋಜನೆ ರೂಪಿಸಬೇಕಿದೆ.
ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ್ದೇನು?: ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಇರುವ ಮೀಸಲಾತಿ ಮಂಡಳಿಯನ್ನು ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿಯಾಗಿ ಪುನರ್ ರಚನೆ ಮಾಡುವ ತೀರ್ಮಾನಗಳನ್ನು ಘೋಷಣೆ ಮಾಡಿದಂತೆ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯ ಹಣಕಾಸು ಸಂಸ್ಥೆಯಿಂದ 2 ಕೋಟಿ ರೂ.ವರೆಗೆ ಸಾಲ ಸೌಲಭ್ಯ, ಗ್ರಾಮೀಣ ಸ್ವಸಹಾಯ ಸಂಘಗಳಿಗೆ ಆರು ಸಾವಿರ ಸಣ್ಣ ಉದ್ಯಮ ಸ್ಥಾಪನೆಗೆ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಬೆಂಬಲ, ಮಹಿಳಾ ಸ್ವಸಹಾಯ ಸಂಘಗಳು, ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ, ಇ- ಮಾರುಕಟ್ಟೆ ಸೌಲಭ್ಯ, ಕಾಲುಸಂಕ ನಿರ್ಮಿಸುವ ಗ್ರಾಮಬಂಧ ಸೇತುವೆ ಯೋಜನೆ, ಆಹಾರ ಪಾರ್ಕ್, ತೋಟಗಾರಿಕೆ ತಂತ್ರಜ್ಞಾನ, ಪಾರ್ಕ್, ರೈತ ಉತ್ಪಾದಕರ ಸಂಸ್ಥೆಗಳು ಮಾರಾಟ ಮಾಡುವ ತೋಟಗಾರಿಕೆ ಉತ್ಪನ್ನಗಳಿಗೆ ಬ್ರಾಂಡ್ ವ್ಯಾಲ್ಯೂ ಕಲ್ಪಿಸುವ ಯೋಜನೆ, ಹೊಸ ಹೈಬ್ರಿಡ್ ಬೀಜ ನೀತಿ ರೂಪಿಸಲಾಗಿದೆ.
ಇದನ್ನೂ ಓದಿ: ನಾಳೆ - ನಾಡಿದ್ದು ಕಾಂಗ್ರೆಸ್ ಪಾದಯಾತ್ರೆ ಬೆಂಗಳೂರಿಗೆ ಆಗಮನ: ನಗರದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ