ಬೆಂಗಳೂರು: ನಗರದ 8 ವಲಯಗಳಲ್ಲಿ, ಅದರಲ್ಲೂ ಪ್ರಮುಖವಾಗಿ ಅತಿ ಹೆಚ್ಚು ಪಾಸಿಟಿವ್ ಕಂಡು ಬರುತ್ತಿದ್ದ ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿ ಪೀಕ್ ತಲುಪಿದ್ದ ಕೊರೊನಾ ಪಾಸಿಟಿವ್ ಸಂಖ್ಯೆ ಈಗ ದಿನದಿಂದ ದಿನಕ್ಕೆ ಇಳಿ ಮುಖವಾಗಿದೆ.
ನಗರದ ಒಟ್ಟು ಸೋಂಕಿತರ ಸಂಖ್ಯೆ 3,00,634 ಕ್ಕೆ ಏರಿಕೆಯಾಗಿದ್ದು, 65,664 ಸಕ್ರಿಯ ಪ್ರಕರಣಗಳಿವೆ. 23,35,009 ಸೋಂಕು ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ 12.88 ಇದೆ. ಪ್ರತಿ ದಿನ ಐವತ್ತು ಸಾವಿರ ಕೊರೊನಾ ಸೋಂಕು ಪರೀಕ್ಷೆಯನ್ನು ಬಿಬಿಎಂಪಿ ಮಾಡುತ್ತಿದೆ. ಇದರಿಂದ ಸೋಂಕಿತರನ್ನು ಶೀಘ್ರ ಪತ್ತೆ ಮಾಡಿ, ಐಸೋಲೇಟ್ ಮಾಡುವುದರಿಂದ ಸೋಂಕು ಹರಡುವಿಕೆ ಹಾಗೂ ಮರಣ ಪ್ರಮಾಣವೂ ಇಳಿಕೆಯಾಗುತ್ತಿದೆ.
ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ ಮಾತನಾಡಿ, ಪಶ್ಚಿಮ ವಲಯದಲ್ಲಿ ದಿನೇ ದಿನೆ ಸೋಂಕಿತರು ದೃಢಪಡುತ್ತಿರುವ ಪ್ರಮಾಣ ಕಡಿಮೆಯಾಗಿದೆ. ಈ ಹಿಂದೆ ಅತಿ ಹೆಚ್ಚು ಪಾಸಿಟಿವ್ ಕಂಡು ಬರುತ್ತಿದ್ದ ಚಾಮರಾಜಪೇಟೆ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಕೊರೊನಾ ಸೋಂಕಿತರು ಕಂಡು ಬರುತ್ತಿದ್ದಾರೆ. ಕೋವಿಡ್ ಟೆಸ್ಟ್ ಹೆಚ್ಚಳದಿಂದ ಇದು ಸಾಧ್ಯವಾಗಿದೆ ಎಂದರು.
ಕಳೆದ ಹತ್ತು ದಿನದ ನಗರ ಪಾಸಿಟಿವ್ ಪ್ರಕರಣಗಳ ವಿವರ
ಒಟ್ಟಿನಲ್ಲಿ ದಿನಕ್ಕೆ ಐದು ಸಾವಿರ ಬರುತ್ತಿದ್ದ ಪಾಸಿಟಿವ್ ಪ್ರಕರಣ , ಈಗ 3,441 ಕ್ಕೆ ಇಳಿಕೆಯಾಗಿದೆ.
ನಾಪತ್ತೆ ಕೇಸ್ ಹೆಚ್ಚಳ: ಇನ್ನೊಂದೆಡೆ ಪಾಸಿಟಿವ್ ಕಂಡು ಬಂದ ನಂತರ ನಾಪತ್ತೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಿಬಿಎಂಪಿಯ ಸಕ್ರಿಯ ಪ್ರಕರಣಗಳಲ್ಲಿ 7,500 ಕ್ಕೂ ಹೆಚ್ಚು ಮಂದಿ ಬಿಬಿಎಂಪಿಯ ಸಂಪರ್ಕಕ್ಕೆ ಸಿಗದೇ ತಲೆಮರೆಸಿಕೊಂಡಿದ್ದಾರೆ. ಕೊರೊನಾ ಪಾಸಿಟಿವ್ ಎಂದು ರಿಪೋರ್ಟ್ ತಿಳಿಸಲು ಕರೆ ಮಾಡಿದ ಕೂಡಲೇ ಫೋನ್ ಸ್ವಿಚ್ಡ್ ಆಫ್, ತಪ್ಪು ವಿಳಾಸ ಅಂತ ಹೇಳುತ್ತಿದ್ದಾರೆ. ಅಕ್ಟೋಬರ್ 6 ರಿಂದ ಅ.12 ರವರೆಗೂ ಏಳು ಸಾವಿರ ಜನ ನಾಪತ್ತೆಯಾಗಿದ್ದಾರೆ.
ಕಳೆದ ಹತ್ತು ದಿನದಲ್ಲಿ ಪತ್ತೆಯಾದ ಪ್ರಕರಣ ಹಾಗೂ ನಾಪತ್ತೆ, ಸೋಂಕಿತರ ಸಂಖ್ಯೆ ಇಳಿಮುಖದ ವಿವರ
ಪೂರ್ವ ವಲಯದಲ್ಲಿ 4,519 ಕೇಸ್ ಪತ್ತೆ- 1,429 ಮಂದಿ ನಾಪತ್ತೆ, ಈ ವಲಯದಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಶೇ 11.78 ದಿಂದ ಶೇ12.40 ಕ್ಕೆ ಏರಿಕೆಯಾಗಿದೆ.
ಪಶ್ಚಿಮ ವಲಯ- 5,281 ಪ್ರಕರಣ- 1,194 ಮಂದಿ ನಾಪತ್ತೆ, ಸೋಂಕಿತರ ಶೇಕಡಾ 16.50 ಯಿಂದ ಶೇ11.4 ಕ್ಕೆ ಇಳಿಕೆಯಾಗಿದೆ.
ದಕ್ಷಿಣ ವಲಯ- 5,117 ಪಾಸಿಟಿವ್- 1,257 ನಾಪತ್ತೆ, ಸೋಂಕಿತರ ಪ್ರಮಾಣ 13.04% ರಿಂದ 11.3% ಕ್ಕೆ ಇಳಿಕೆ
ಆರ್ ಆರ್ ನಗರ - 3284 ಪಾಸಿಟಿವ್- 961 ಮಂದಿ ನಾಪತ್ತೆ, ಸೋಂಕಿತರ ಪ್ರಮಾಣ 17.34% ನಿಂದ 11.06% ಕ್ಕೆ ಇಳಿಕೆ
ದಾಸರಹಳ್ಳಿ- 1384 ಪಾಸಿಟಿವ್ - 317 ನಾಪತ್ತೆ, ಸೋಂಕಿತರ ಪ್ರಮಾಣ 20.20% ರಿಂದ 10.10% ಕ್ಕೆ ಇಳಿಕೆ
ಮಹದೇವಪುರ- 3998 ಪಾಸಿಟಿವ್- 1127 ಕಣ್ಮರೆ, ಸೋಂಕಿತರ ಪ್ರಮಾಣ19.73% ನಿಂದ 9.0% ಕ್ಕೆ ಇಳಿಕೆ
ಬೊಮ್ಮನಹಳ್ಳಿ- 3948 ಪಾಸಿಟಿವ್- 812 ನಾಪತ್ತೆ, 18.5% ದಿಂದ 10.4% ಕ್ಕೆ ಇಳಿಕೆ
ಯಲಹಂಕ- 3351 ಪಾಸಿಟಿವ್ - 532 ನಾಪತ್ತೆಯಾದ ಸೋಂಕಿತರು, ಸೋಂಕಿತರ ಪ್ರಮಾಣ 17.18% ದಿಂದ 11.4% ಕ್ಕೆ ಇಳಿಕೆ
ನಾಪತ್ತೆಯಾದವರನ್ನು ಹುಡುಕಲು ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿದೆ. ಈವರೆಗೆ 6,867 ಕೊರೊನಾ ಸೋಂಕಿತರನ್ನು ಕಾಲ್ ಡಿಟೇಲ್ ರಿಪೋರ್ಟ್ ಮೂಲಕ ಟ್ರೇಸ್ ಮಾಡಿದ್ದಾರೆ.