ಬೆಂಗಳೂರು: ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸದ್ಯ ರಾಜ್ಯಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಕಾಪಾಡಲು ಸಾವಿರಾರು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡು ಕಟ್ಟೆಚ್ಚರ ವಹಿಸುತ್ತಿದ್ದಾರೆ. ಜನರು ಗುಂಪು ಸೇರದಂತೆ ತಡೆಯಲು ಸ್ಥಳೀಯ ಜಿಲ್ಲಾಡಳಿತದಿಂದ ನಿಷೇಧಾಜ್ಞೆ ಹಾಗೂ ಕರ್ಫ್ಯೂ ವಿಧಿಸಲಾಗಿದೆ.
ಕೋಮು ಸಂಘರ್ಷದ ನೆರಳಿನಲ್ಲಿ ನಡೆಯುವ ಇಂತಹ ಕೊಲೆಗಳು ರಾಜಕೀಯ ನೆಲೆಗಟ್ಟಿನಲ್ಲಿ ಬಹು ಚರ್ಚೆಗೆ ನಾಂದಿಯಾಗಿವೆ. ಹಿಂದೂಪರ ಕಾರ್ಯಕರ್ತರ ಕೊಲೆ ಇದೇ ಮೊದಲೇನಲ್ಲ. ರಾಜ್ಯದಲ್ಲಿ ಕೋಮು ಸಂಘರ್ಷಗಳಾದಾಗ ಒಬ್ಬರ ಹತ್ಯೆಯು ಪೂರ್ವ ನಿಯೋಜಿತವಾಗಿರುತ್ತೆ ಅನ್ನೋ ಮಾತುಗಳು ಕೇಳಿಬಂದಿವೆ. ಹಾಗೇ ನೋಡುವುದಾದರೆ ಈ ಹಿಂದೆ ಕೂಡಾ ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆಗಳು ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
- ಟಿಪ್ಪು ಜಯಂತಿ ದಿನದಂದೇ ಕುಟ್ಟಪ್ಪ ಹತ್ಯೆ: ಸಿದ್ದರಾಮಯ್ಯ ನೇತೃತ್ವ ಸರ್ಕಾರದಲ್ಲಿದ್ದಾಗ ತೀವ್ರ ವಿರೋಧದ ನಡುವೆಯೂ 2015 ರ ನವೆಂಬರ್ 10ರಂದು ಮೊದಲ ಬಾರಿಗೆ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಿಸಿತ್ತು. ಕೊಡಗಿನಲ್ಲಿ ಎರಡು ಕೋಮುಗಳ ಮಧ್ಯೆ ಸಂಘರ್ಷವಾಗಿತ್ತು. ಟಿಪ್ಪು ಜಯಂತಿ ದಿನದಂದೇ ನಡೆದ ಗಲಾಟೆಯಲ್ಲಿ ಹಿಂದೂ ಕಾರ್ಯಕರ್ತ ಕುಟ್ಟಪ್ಪ ಅವರನ್ನ ಹತ್ಯೆ ಮಾಡಲಾಗಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
- ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ: ರಾಷ್ಟ್ರೀಯ ಸ್ವಯಂಸೇವಕ (ಆರ್ ಎಸ್ ಎಸ್) ಕಾರ್ಯಕರ್ತ ಶಿವಾಜಿನಗರ ನಿವಾಸಿಯಾಗಿದ್ದ ರುದ್ರೇಶ್ 2016 ಅಕ್ಟೋಬರ್ 16 ರಂದು ಪಥ ಸಂಚಲನ ಮುಗಿಸಿಕೊಂಡು ಬೆಂಗಳೂರಿನ ಕಾಮರಾಜರಸ್ತೆಯಲ್ಲಿ ಬರುತ್ತಿದ್ದ ರುದ್ರೇಶ್ ಅವರನ್ನ ಗುರಿಯಾಗಿಸಿಕೊಂಡು ಬೈಕಿನಲ್ಲಿ ಬಂದು ಲಾಂಗ್ ನಿಂದ ಕುತ್ತಿಗೆ ಸೀಳಿ ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದು ಎಡ-ಬಲಪಂಥಿಯರ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಐದಕ್ಕಿಂತ ಹೆಚ್ಚು ಆರೋಪಿಗಳನ್ನ ಬಂಧಿಸಿದ್ದರು.
- ಕೆ.ರಾಜು, ವಿಎಚ್ ಪಿ ಮುಖಂಡ: ಬಲಪಂಥೀಯ ಸೈದ್ಧಾಂತಿಕ ವಿಚಾರ ವಿರೋಧಿಸಿ 2016 ಮಾರ್ಚ್ 13ರ ಸಂಜೆ ಮೈಸೂರಿನಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಕ್ಯಾತಮಾರನಹಳ್ಳಿ ನಿವಾಸಿಯಾಗಿದ್ದ ರಾಜು, ಮೈಸೂರಿನ ಎಂಜಿ ರಸ್ತೆಯ ಟೀ ಸ್ಟಾಲ್ ಬಳಿ ರಾಜುನನ್ನು ಗುರಿಯಾಗಿಸಿಕೊಂಡು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದರು.
- ಸಂಕಲ್ಪ ಯಾತ್ರೆ ಮುಗಿಸಿ ವಾಪಸಾಗುವಾಗ ಪ್ರವೀಣ್ ಪೂಜಾರಿ ಹತ್ಯೆ: 2016 ಅಗಸ್ಟ್ 14 ರಂದು ಕೊಡಗಿನ ಗುಡ್ಡೆ ಹೊಸೂರಿನಲ್ಲಿ ಆರೋಪಿಗಳು ಪ್ರವೀಣ್ ಪೂಜಾರಿಯನ್ನ ಗುರಿಯಾಗಿಸಿಕೊಂಡು ಆರೋಪಿಗಳು ಕೊಲೆ ಮಾಡಿದ್ದರು. ಸಂಕಲ್ಪ ಯಾತ್ರೆ ಮುಗಿಸಿ ಬರುವಾಗ ಈ ದುರ್ಘಟನೆ ನಡೆದಿತ್ತು. ಘಟನೆ ಸಂಬಂಧ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.
- ಪ್ರಶಾಂತ್ ಪೂಜಾರಿ: 2015ರ ಅಕ್ಟೋಬರ್ 9ರಂದು ಬೆಳಗ್ಗೆ 6.30ಕ್ಕೆ ಹೂವಿನ ಅಂಗಡಿಗೆ ಹೋಗುತ್ತಿದ್ದ ಪ್ರಶಾಂತ್ ಪೂಜಾರಿ ಹತ್ಯೆ ಮಾಡಲಾಗಿತ್ತು. ಮೂಡುಬಿದಿರೆಯಲ್ಲಿ 6 ಮಂದಿಯ ತಂಡ 3 ಬೈಕ್ಗಳಲ್ಲಿ ಬಂದು ಕೊಲೆ ಮಾಡಿತ್ತು. ಮೊಹಮ್ಮದ್ ಹನೀಫ್ ಇಬ್ರಾಹಿಂ ಲಿಯಾಕತ್ ಮೊಹಮ್ಮದ್ ಇಲ್ಯಾಸ್, ಅಬ್ದುಲ್ ರಶೀದ್ ಎಂಬ ಆರೋಪಿಗಳ ಬಂಧನವಾಗಿತ್ತು.
- ಶರತ್ ಮಡಿವಾಳ ಹತ್ಯೆ: 2017ರ ಜುಲೈ 4ರಂದು ಬಿ.ಸಿ. ರೋಡಿನ ಉದಯ್ ಲಾಂಡ್ರಿಯಲ್ಲಿ ಕೆಲಸ ಮುಗಿಸಿ ಅಂಗಡಿಯ ಬಾಗಿಲು ಹಾಕುತ್ತಿದ್ದ ವೇಳೆ ದುಷ್ಕರ್ಮಿಗಳು ಶರತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಗಂಭೀರ ಗಾಯಗೊಂಡಿದ್ದ ಶರತ್‌ನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಫಲಿಸದೆ ಶರತ್ ಮೃತಪಟ್ಟಿದ್ದ.
ಇದನ್ನೂ ಓದಿ: ಶಿವಮೊಗ್ಗ ನಗರದಲ್ಲಿ ಫೆ. 25ರ ತನಕ ಕರ್ಫ್ಯೂ ವಿಸ್ತರಣೆ: ಜಿಲ್ಲಾಧಿಕಾರಿ ಡಾ. ಸೆಲ್ವಮಣಿ