ಬೆಂಗಳೂರು: ಖಾಸಗಿ ಅನುದಾನ ರಹಿತ ಶಾಲಾ-ಕಾಲೇಜುಗಳ ಶಿಕ್ಷಕರನ್ನು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಅಜೀವ ಸದಸ್ಯರನ್ನಾಗಿ ನೇಮಕ ಮಾಡಿಕೊಂಡು ‘ಅನುದಾನ ರಹಿತ ಶಾಲೆಗಳ ಶಿಕ್ಷಕರತ್ತ ಸರ್ಕಾರ’ ಎಂಬ ಧ್ಯೇಯದೊಂದಿಗೆ ನಿಧಿಯ ಸೌಲಭ್ಯಗಳನ್ನು ವಿಸ್ತರಿಸಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಮತ್ತು ರಾಷ್ಟ್ರೀಯ ಶಿಕ್ಷಕಕರ ಕಲ್ಯಾಣ ಪ್ರತಿಷ್ಠಾನ ಈ ಕುರಿತು ಆದೇಶ ಹೊರಡಿಸಿ, ಕೊರೊನಾದಂತಹ ಸಂಕಷ್ಟ ಕಾಲದಲ್ಲಿ ಖಾಸಗಿ ಶಿಕ್ಷಕರು ತೀವ್ರ ಸಂಕಷ್ಟ ಅನುಭವಿಸಿದ್ದರಿಂದಾಗಿ ಎಲ್ಲ ಶಿಕ್ಷಕರಂತೆ ಕಷ್ಟ ಕಾಲದ ತತ್‍ಕ್ಷಣದ ನೆರವಿಗೆ ಶಿಕ್ಷಣ ನಿಧಿಯ ಸದಸ್ಯತ್ವ ನೀಡಿ ಆ ಮೂಲಕ ನಿಧಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಕರಿಗೆ ದೊರೆಯುವ ಸೌಲಭ್ಯ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಕೊರೊನಾ ಸೋಂಕು ಶಿಕ್ಷಣ ಕ್ಷೇತ್ರದ ಮೇಲೆ ಪ್ರಹಾರ ನಡೆಸಿದೆ. ಇದರಿಂದ ಮಕ್ಕಳ ಭವಿಷ್ಯವನ್ನು ರೂಪಿಸುವ ಪವಿತ್ರ ಕಾರ್ಯಕ್ಕೆ ಅತೀವವಾದ ಹಿನ್ನಡೆಯಾಗಿದೆ. ಶಾಶ್ವತ ಕಾಯಕಲ್ಪವನ್ನು ಒದಗಿಸಲು ಹಲವು ಮಹತ್ವಪೂರ್ಣ ಯೋಜನೆಗಳನ್ನು ನಾವು ಕೈಗೆತ್ತಿಕೊಳ್ಳಲು ಸಾಧ್ಯವೇ ಆಗಿಲ್ಲ. ಆರ್ಥಿಕತೆಯ ಮೇಲಿನ ತೀವ್ರ ಹೊಡೆತ, ಭವಿಷ್ಯದ ಮೇಲೂ ಪ್ರತಿಕೂಲವಾದ ಪರಿಣಾಮಗಳನ್ನು ಬೀರಿದೆ.
ನಿಧಿಯ ಮೂಲಕ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ನೀಡಲಾಗುವ ಸೌಲಭ್ಯಗಳೇನು?
ಈಗ ಘೋಷಿಸುತ್ತಿರುವ ಕಾರ್ಯಕ್ರಮದಲ್ಲಿ ‘ಅನುದಾನ ರಹಿತ ಶಾಲೆಗಳ ಶಿಕ್ಷಕರತ್ತ ಸರ್ಕಾರ’ ಎಂಬ ಧ್ಯೇಯದೊಂದಿಗೆ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರನ್ನು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಅಜೀವ ಸದಸ್ಯರನ್ನಾಗಿ ನೇಮಕ ಮಾಡಿಕೊಂಡು ನಿಧಿಯ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತದೆ.
- ಶಿಕ್ಷಕರಿಗೆ ಅಪಘಾತ ಮತ್ತು ಮರಣ ಪರಿಹಾರ ಸೌಲಭ್ಯ ನೀಡಲಾಗುತ್ತದೆ
- ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ (ನಿವೃತ್ತ ಶಿಕ್ಷಕರೂ ಸೇರಿ)
- ಶಿಕ್ಷಕರು ಮತ್ತು ಅವರ ಅವಲಂಬಿತರಿಗೆ ವೈದ್ಯಕೀಯ ಧನಸಹಾಯ
- ಶಿಕ್ಷಕರ ಮಕ್ಕಳಿಗೆ ಪ್ರತಿಭಾ ವಿದ್ಯಾರ್ಥಿ ವೇತನ
- ಶಿಕ್ಷಕರಿಗೆ ತಾಲೂಕು/ಜಿಲ್ಲಾ/ರಾಜ್ಯಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳು.
- ಶಿಕ್ಷಕರಿಗೆ ರಾಜ್ಯ/ಜಿಲ್ಲಾ ಮಟ್ಟದ ಪ್ರಶಸ್ತಿಗಳು
- ಲ್ಯಾಪ್‍ಟಾಪ್/ಟ್ಯಾಬ್ ಖರೀದಿಗಾಗಿ ಶಿಕ್ಷಕರಿಗೆ ಬಡ್ಡಿ ರಹಿತ ಧನಸಹಾಯ
- ವೈದ್ಯಕೀಯ/ ಎಂಜಿನಿಯರಿಂಗ್ ಕೋರ್ಸ್ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳ ಬ್ಯಾಂಕ್‍ನ ಶೈಕ್ಷಣಿಕ ಸಾಲದ ಮರುಪಾವತಿ
ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ.
ಸದಸ್ಯತ್ವದ ಮಾನದಂಡ/ಷರತ್ತುಗಳೇನು?
- ರಾಜ್ಯದ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು/ ಉಪನ್ಯಾಸಕರು ನಿಧಿಯ ಸದಸ್ಯತ್ವ ಪಡೆಯಲು 3000 ರೂ. ಶುಲ್ಕ ನಿಗದಿಪಡಿಸಲಾಗಿದೆ. ಒಮ್ಮೆ ಇದನ್ನು ಪಾವತಿಸಿ ಅಜೀವ ಸದಸ್ಯತ್ವದ ಕಾರ್ಡನ್ನು ಶಿಕ್ಷಕರು ಪಡೆದುಕೊಂಡರೆ ಮುಂದಿನ ದಿನಗಳಲ್ಲಿ ಅವರಿಗೆ ನಿಧಿಯ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
- ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರುಗಳಿಗೆ ಮಾತ್ರವೇ ನಿಧಿಯ ಸೌಲಭ್ಯ ದೊರೆಯುವಂತಾಗಲು ಹಾಗೆಯೇ ನಿಧಿಯ ಸವಲತ್ತುಗಳು ದುರುಪಯೋಗವಾಗದಂತೆ ತಡೆಯುವ ಸಲುವಾಗಿ ನಿಧಿಯ ಸದಸ್ಯತ್ವ ಪಡೆಯಲು ಹಲವಾರು ಮಾನದಂಡಗಳನ್ನು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
- ಈ ಸೌಲಭ್ಯ ಪಡೆಯಲು ಶಿಕ್ಷಕ ಸ್ಥಾನಕ್ಕೆ ಅರ್ಹವಾದ ವಿದ್ಯಾರ್ಹತೆಯೊಂದಿಗೆ ನೇಮಕಾತಿ ಹೊಂದಿರಬೇಕು. ನೇಮಕಾತಿಗಳು ಶಿಕ್ಷಣ ಕಾಯ್ದೆಯನ್ವಯ ಹಾಗೆಯೇ ಸರ್ಕಾರಿ ಆದೇಶದ ಪ್ರಕಾರವೇ ನೇಮಕವಾಗಿರಬೇಕು.
- ಶಿಕ್ಷಕರು ಒಂದೇ ಶಾಲೆಯಲ್ಲಿ ಕನಿಷ್ಠ 4 ವರ್ಷಗಳ ನಿರಂತರ ಸೇವೆ ಪೂರೈಸಿರಬೇಕು. ಅವಧಿ ಪೂರೈಸಿರುವ ಬಗ್ಗೆ ಕಾರ್ಯನಿರ್ವಹಿಸುತ್ತಿರುವ ಕುರಿತು ಸ್ಥಳೀಯ ಬಿಇಒ/ಡಿಡಿಪಿಐ/ ಸಂಬಂಧಿಸಿದ ಮೇಲಾಧಿಕಾರಿಗಳ ಮೇಲು ಸಹಿಯೊಂದಿಗೆ ಶಾಲಾಡಳಿತ ಮಂಡಳಿಗಳಿಂದ ಪಡೆದ ಪ್ರಮಾಣಪತ್ರ ಪಡೆದಿರಬೇಕು.
- ಅಜೀವ ಸದಸ್ಯತ್ವ ಕಾರ್ಡು ನೀಡಿದ 2 ವರ್ಷಗಳವರೆಗೆ ಲಾಕಿಂಗ್ ಪೀರಿಯಡ್ ಎಂದು ಭಾವಿಸಿ 2 ವರ್ಷಗಳ ನಂತರದಲ್ಲಿ ನಿಧಿಯಿಂದ ಧನಸಹಾಯ ಬಿಡುಗಡೆಗೆ ಕ್ರಮ ವಹಿಸಲಾಗುತ್ತದೆ. ಶಿಕ್ಷಕ ಹುದ್ದೆ ತೊರೆದು ಶಿಕ್ಷಕೇತರ ಹುದ್ದೆಗೆ ಸೇರ್ಪಡೆಯಾದ ದಿನಾಂಕಗಳಿಂದ ಅಜೀವ ಸದಸ್ಯತ್ವ ತಾನಾಗಿಯೇ ರದ್ದಾಗಲಿದ್ದು, ನಿಧಿಯ ಸೌಲಭ್ಯಗಳಿಗೆ ಅವಕಾಶವಿಲ್ಲ.
- ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ ಶಾಲೆಯು ನಿಧಿಗಳ ಕಚೇರಿಯಲ್ಲಿ ಕಡ್ಡಾಯವಾಗಿ ಶಾಲಾ ಕೋಡ್ ಸಂಖ್ಯೆ ಪಡೆದು ನಿಧಿಗಳಿಗೆ ಸಲ್ಲಬೇಕಾದ ಎಲ್ಲ ಶುಲ್ಕಗಳನ್ನು ಪಾವತಿಸಿರತಕ್ಕದ್ದು.
- ರಾಜ್ಯ ಸರ್ಕಾರದ ಪಠ್ಯಕ್ರಮದಲ್ಲಿ ಬೋಧನೆ ಮಾಡುತ್ತಿರಬೇಕು, ಶಿಕ್ಷಕರಿಗೆ ಆಡಳಿತ ಮಂಡಳಿಯಿಂದ ಹುದ್ದೆಗಳಿಗೆ ಅನುಗುಣವಾಗಿ ವೇತನ ಪಾವತಿಸುತ್ತಿರುವ ಕುರಿತು ಮಾಸಿಕ ದೃಢೀಕರಣ ಪತ್ರ ಮತ್ತು ವೇತನ ಪಾವತಿಯ ಬ್ಯಾಂಕ್ ವಿವರ ಮಾಹಿತಿ ಸಲ್ಲಿಸಬೇಕಾಗುತ್ತದೆ.
- ಶಿಕ್ಷಕರು, ಶಿಕ್ಷಕರ ಪತಿ/ಪತ್ನಿ ಮತ್ತು ಅವಲಂಬಿತ ಮಕ್ಕಳು ಮಾತ್ರವೇ ನಿಧಿಯ ಸೌಲಭ್ಯ ಪಡೆಯಲು ಅರ್ಹರಿದ್ದಾರೆ.
ರಾಜ್ಯದ ಬಹುತೇಕ ಅನುದಾನ ರಹಿತ ಶಾಲಾ ಕಾಲೇಜು ಶಿಕ್ಷಕರು ಕೋವಿಡ್‍ನಂತಹ ಈ ವಿಷಮ ಕಾಲಘಟ್ಟದಲ್ಲಿ ವೇತನದ ವ್ಯತ್ಯಯದಿಂದ ತೊಂದರೆ ಅನುಭವಿಸಿದ್ದನ್ನು ಮನಗಂಡು ಶಿಕ್ಷಕರು ಮತ್ತು ಅವರ ಕುಟುಂಬ ಸದಸ್ಯರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಅವರಿಗೂ ನಿಧಿಯ ಸೌಲಭ್ಯಗಳನ್ನು ವಿಸ್ತರಿಸುವಂತಹ ಕ್ರಮಕ್ಕೆ ಮುಂದಾಗಿದೆ.