ಬೆಂಗಳೂರು: ಮೇಕೆದಾಟು ಯೋಜನೆ ಹಾಗೂ ಕಾವೇರಿ ವಿಚಾರದಲ್ಲಿ ತಮಿಳುನಾಡು ಪದೇ ಪದೇ ತನ್ನ ತಕರಾರು ಮಾಡುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾವೇರಿ ಸಭೆಯಲ್ಲಿ ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ಮಾಡದಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆ ಪತ್ರವೇ ಕಾನೂನು ಬಾಹಿರವಾಗಿದೆ ಎಂದರು. 4.7 ಟಿಎಂಸಿ ನೀರನ್ನು ಬೆಂಗಳೂರಿನ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಮೇಕೆದಾಟು ಯೋಜನೆ ಮಾಡಲಾಗುತ್ತಿದೆ. ಅದಕ್ಕೆ ಇವರು ವಿರೋಧ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ತಮಿಳುನಾಡಿಗೆ ನ್ಯಾಯಾಲಯದ ಆದೇಶದಂತೆ ನಾವು ನೀರು ಕೊಡುತ್ತಿದ್ದೇವೆ. ಅವರ ಒಂದು ಹನಿ ನೀರನ್ನೂ ನಾವು ಬಳಕೆ ಮಾಡಿಕೊಂಡಿಲ್ಲ. ನಾವು ಒಕ್ಕೂಟದ ವ್ಯವಸ್ಥೆಯಲ್ಲಿರುವಾಗ ತಮಿಳುನಾಡು ಈ ರೀತಿ ವಿರೋಧ ಮಾಡುವುದು ಸರಿಯಲ್ಲ. ದೇಶದ 30 ರಾಜ್ಯಗಳ ಜನರು ಇಂದು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿಗಳು ಪತ್ರ ಬರೆದಿರುವುದು ಒಕ್ಕೂಟದ ವ್ಯವಸ್ಥೆ ವಿರುದ್ಧ ಎಂದು ಬೇಸರ ವ್ಯಕ್ತಪಡಿಸಿದರು.
ದೆಹಲಿ ಪ್ರವಾಸ : ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಮಾಲೋಚಿಸಲು ನಾಳೆಯಿಂದ ಎರಡು ದಿನ ದೆಹಲಿ ಪ್ರವಾಸ ಹಮ್ಮಿಕೊಂಡಿದ್ದೇನೆ. ನಾಲ್ಕು ಸಚಿವಾಲಯಗಳ ಜೊತೆಯಲ್ಲಿ ಚರ್ಚೆ ಮಾಡಲು ಸಮಯ ಕೇಳಿದ್ದೇನೆ. ಮೇಕೆದಾಟು, ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆಯೂ ಚರ್ಚೆ ಮಾಡುತ್ತೇನೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಇದನ್ನೂ ಓದಿ :'ದೇಶ ಗಾಂಧಿ ಕುಟುಂಬದ ದಿಕ್ಕಿನಲ್ಲಿ ನಡೆಯೋಲ್ಲ, ಸಂವಿಧಾನದ ಪ್ರಕಾರ ನಡೆಯುತ್ತಿದೆ'