ಬೆಂಗಳೂರು : ಕಳೆದ ಎರಡು ದಿನಗಳಿಂದೆ ಸಂಸದ ಪ್ರತಾಪ್ ಸಿಂಹಗೆ ತಲೆ ಕೆಟ್ಟಿದೆ. ಪ್ರತಾಪ ಸಿಂಹ ಅವರದ್ದು ಚಿಲ್ಲರೆ ಮನಸ್ಥಿತಿ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಟೀಕಿಸಿದ್ದರು. ಇದೀಗ ಮತ್ತೆ ಪ್ರತಾಪ್ ಸಿಂಹ ವಿರುದ್ಧ ಎಂ ಬಿ ಪಾಟೀಲ್ ತಿರುಗಿ ಬಿದ್ದಿದ್ದಾರೆ. "ನಾನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಬಗ್ಗೆ ಮಾತನಾಡಿದ ತಕ್ಷಣ ಅದು ಇಡೀ ಬ್ರಾಹ್ಮಣ ಸಮುದಾಯವನ್ನು ಬೈದಂತಲ್ಲ ಎಂದಿದ್ದಾರೆ.
ನನ್ನ ಮತ್ತು ಬ್ರಾಹ್ಮಣರ ನಡುವಿನ ಸಂಬಂಧ ಎಷ್ಟೊಂದು ಮಧುರವಾಗಿದೆ. ಬೇಕಿದ್ದರೇ ಒಮ್ಮೆ ವಿಜಯಪುರಕ್ಕೆ ಬಂದು ನೋಡಲಿ. ಪ್ರತಾಪ್ ಸಿಂಹ ಅವರು ದಿನವೂ ನನ್ನ ವಿರುದ್ಧ ವೈಯಕ್ತಿಕವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಅವರ ಮನಃಸ್ಥಿತಿ ತುಂಬಾ ಚಿಂತಾಜನಕವಾಗಿರುವಂತಿದೆ" ಎಂದು ಎಂ ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಮಂಗಳವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, "ಹಿಂದೆ ಬಿಜೆಪಿಯ ದಿವಗಂತ ಅನಂತ ಕುಮಾರ್ ಅವರು ಕೇಂದ್ರದಲ್ಲಿ ಮಂತ್ರಿಗಳಾಗಿದ್ದರು. ಆಗ ನಾನು ರಾಜ್ಯದಲ್ಲಿ ನೀರಾವರಿ ಸಚಿವನಾಗಿದ್ದೆ. ನಮ್ಮ ರಾಜ್ಯದ ಕೆಲಸಗಳ ಮೇಲೆ ಹೋದಾಗ ಅವರು ಪಕ್ಷದ ಮಿತಿಯನ್ನು ಮೀರಿ, ಕರ್ನಾಟಕದ ಹಿತವನ್ನು ಕಾಯುತ್ತಿದ್ದರು. ನಮ್ಮನ್ನು ಎಲ್ಲಾ ಸಚಿವರು ಮತ್ತು ಅಧಿಕಾರಿಗಳ ಬಳಿಗೆ ಕೊಂಡೊಯ್ಯುತ್ತಿದ್ದರು. ಪ್ರತಾಪ್ ಸಿಂಹ ತರದವರು ಅಂಥವರಿಂದ ಕಲಿಯಬೇಕಾಗಿದೆ. ಆದರೆ, ಬಿಜೆಪಿಯವರಿಗೆ ಈಗ ಅನಂತಕುಮಾರ್ ಅವರ ನೆನಪೂ ಇಲ್ಲ" ಎಂದರು.
ನಮ್ಮ ಬಿಎಲ್‌ಡಿಇ ಸಂಸ್ಥೆಯಿಂದ ದಾಸಸಾಹಿತ್ಯದ ಸಮಗ್ರ ಸಂಪುಟ ತರುತ್ತಿದ್ದೇವೆ. ಬ್ರಾಹ್ಮಣರಾದ ಕೃಷ್ಣ ಕೊಲ್ಹಾರ ಕುಲಕರ್ಣಿಯವರ ಸಂಪಾದಕತ್ವದಲ್ಲಿ ಆದಿಲ್‌ಶಾಹಿ ಸಂಪುಟಗಳನ್ನು ತಂದೆವು. ಹಾಗೆಯೇ ನಮ್ಮ ಸಂಸ್ಥೆಯಲ್ಲಿ ಸಾಕಷ್ಟು ಬ್ರಾಹ್ಮಣರಿದ್ದಾರೆ. ನನಗೆ ಚಿಕ್ಕಂದಿನಲ್ಲಿ ಪಾಠ ಕಲಿಸಿದ ದೇಶಪಾಂಡೆ, ಹಣಮಂತರಾವ್ ಅವರೆಲ್ಲ ಬ್ರಾಹ್ಮಣರೇ ಆಗಿದ್ದರು. 1998ರಲ್ಲಿ ನಾನು ಲೋಕಸಭೆ ಚುನಾವಣೆಗೆ ನಿಂತು ಗೆದ್ದಾಗ ವಿಜಯಪುರ ಕ್ಷೇತ್ರದ ಒಂದು ಲಕ್ಷಕ್ಕಿಂತಲೂ ಹೆಚ್ಚು ಬ್ರಾಹ್ಮಣ ಮತದಾರರ ಪೈಕಿ ಶೇಕಡ 90ರಷ್ಟು ಜನ ನನಗೆ ಮತ ಚಲಾಯಿಸಿದ್ದರು" ಎಂದು ಎಂ ಬಿ ಪಾಟೀಲ್ ಹೇಳಿದರು.
ನಮ್ಮ ತಂದೆ ಮತ್ತು ನಾನು ಬ್ರಾಹ್ಮಣರ ಜೊತೆ ಮಧುರ ಸಂಬಂಧಕ್ಕೆ ಹೆಸರಾಗಿದ್ದೇವೆ. ಹಲಗಲಿಯ ದೇವಸ್ಥಾನ, ವಿಜಯಪುರದ ಹನುಮಂತನ ದೇವಸ್ಥಾನ ಸೇರಿದಂತೆ ಬ್ರಾಹ್ಮಣ ಸಮುದಾಯದ ಅನೇಕ ಕೆಲಸಗಳನ್ನು ನಾನು ಹೃತ್ಪೂರ್ವಕವಾಗಿ ಮಾಡಿಕೊಟ್ಟಿದ್ದೇನೆ. ಹಾಗೆಯೇ ಆ ಸಮಾಜವೂ ನನ್ನೊಂದಿಗೆ ಅಭಿಮಾನದಿಂದ ಗುರುತಿಸಿಕೊಂಡಿದೆ. ಇವೆಲ್ಲ ಗೊತ್ತಿಲ್ಲದೆ ಪ್ರತಾಪ್ ಸಿಂಹ ಕೀಳು ಅಭಿರುಚಿಯ ವಿಕೃತಿಯನ್ನು ತೋರಿಸುತ್ತಿದ್ದಾರೆ. ಇನ್ನು ಮುಂದೆ ನಾನು ಅವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ" ಎಂದು ಪಾಟೀಲ್ ಸ್ಪಷ್ಟಪಡಿಸಿದರು.
ಪ್ರತಾಪ್ ಅವರು ಸಿದ್ದರಾಮಯ್ಯನವರು ನನ್ನ ಹೆಗಲ ಮೇಲೆ ಬಂದೂಕನ್ನಿಟ್ಟು ಬೇರೆಯವರತ್ತ ಹೊಡೆಯುತ್ತಿದ್ದಾರೆ ಎಂದಿದ್ದಾರೆ. ನಾನು ವಿಜಯಪುರದವನು. ಯಾರಿಗಾದರೂ ಹೊಡೆಯಬೇಕೆನಿಸಿದರೆ ನೇರವಾಗಿ ಹೊಡೆಯುವ ತಾಕತ್ತು ನನಗಿದೆ. ಇದನ್ನೆಲ್ಲ ಬಿಟ್ಟು ಅವರು ಸದ್ಯದಲ್ಲೇ ಬರಲಿರುವ ಲೋಕಸಭೆ ಚುನಾವಣೆಯ ಬಗ್ಗೆ ತಲೆಕೆಡಿಸಿಕೊಂಡು, ರಚನಾತ್ಮಕ ಕೆಲಸ ಮಾಡಲಿ ಎಂದು ಪಾಟೀಲ್ ಟಾಂಗ್ ಕೊಟ್ಟರು.
ಬಿಎಲ್ ಸಂತೋಷ್ ಬಗ್ಗೆ ನನ್ನ ಟೀಕೆ ರಾಜಕೀಯ ಸ್ವರೂಪದ್ದು. ಅದರಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವ ಉದ್ದೇಶವಿಲ್ಲ. ನಾನು ನನ್ನ ಜೀವನದಲ್ಲೇ ಯಾವತ್ತೂ ಬ್ರಾಹ್ಮಣರ ಬಗ್ಗೆಯಾಗಲಿ, ಇನ್ನೊಂದು ಸಮುದಾಯದ ಬಗ್ಗೆಯಾಗಲಿ ಅಪ್ಪಿತಪ್ಪಿಯೂ ಅವಹೇಳನಕಾರಿಯಾಗಿ ಮಾತನಾಡಿಲ್ಲ. ನಾವು ಪ್ರತಿಯೊಬ್ಬರನ್ನೂ ಗೌರವಿಸುವ ಸಂಸ್ಕಾರವುಳ್ಳವರು. ಪ್ರತಾಪ್ ಸಿಂಹ ಅವರು ನನ್ನನ್ನು ಸಿದ್ದರಾಮಯ್ಯನವರ ಚೇಲಾ ಎಂದಿದ್ದಾರೆ. ಈ ವ್ಯಕ್ತಿ ಸಂತೋಷ್ ಅವರು ಸಾಕಿಕೊಂಡಿರುವ ಒಂದು ಚೇಳು. ಅವರು ಇಂಥ ಹಲವು ಚೇಳುಗಳನ್ನು ಸಾಕಿಕೊಂಡಿದ್ದಾರೆ. ಹೀಗಾಗಿ ದಿನವೂ ಅವರು ಇಂಥ ಚೇಳುಗಳನ್ನು ಬಿಟ್ಟು, ಮಜಾ ತೆಗೆದುಕೊಳ್ಳುತ್ತಿರುತ್ತಾರೆ ಎಂದು ಎಂ ಬಿ ಪಾಟೀಲ್ ಕುಟುಕಿದರು.
ನನ್ನದು ಚಿಲ್ಲರೆ ಖಾತೆ ಎಂದು ಬೇರೆ ಅವರು ಹೇಳಿದ್ದಾರೆ. ಕೈಗಾರಿಕಾ ಖಾತೆಯ ಮಹತ್ವದ ಬಗ್ಗೆ ಅವರು ಮೋದಿಯವರ ಬಳಿ ಕೇಳಿ ತಿಳಿದುಕೊಂಡರೆ ಒಳ್ಳೆಯದು. ಖಾತೆ ಯಾವುದಾದರೂ ನಾವು ಮಾಡುವ ಕೆಲಸ ಮುಖ್ಯ. ಇಂಥ ಪ್ರಾಥಮಿಕ ಸಂಗತಿಗಳು ಒಬ್ಬ ಸಂಸದರಿಗೆ ಗೊತ್ತಿಲ್ಲದೆ ಇರುವುದು ವಿಷಾದನೀಯ ಸಂಗತಿ ಎಂದು ಪಾಟೀಲ್ ಹೇಳಿದರು.
ಇದನ್ನೂ ಓದಿ : ಪ್ರತಾಪ್ ಸಿಂಹಗೆ ತಲೆ ಕೆಟ್ಟಿದೆ.. ಅವರದು ಚಿಲ್ಲರೆ ಮನಸ್ಥಿತಿ : ಸಚಿವ ಎಂ ಬಿ ಪಾಟೀಲ್