ಬೆಂಗಳೂರು : ಅಪರಾಧ ಪ್ರಕರಣದಲ್ಲಿ ಭಾಗಿಯಾದ ಯಾವುದೇ ಪೊಲೀಸ್ ಸಿಬ್ಬಂದಿ ಇದ್ದರೂ, ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಎಚ್ಚರಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವರು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ಸಾರ್ವಜನಿಕರ ಜೀವ ಹಾಗೂ ಆಸ್ತಿಪಾಸ್ತಿ ರಕ್ಷಿಸುವ ಹೊಣೆಗಾರಿಕೆ ಹೊಂದಿರುವ ಪೊಲೀಸ್ ಸಿಬ್ಬಂದಿಯೇ ಅಪರಾಧ ಎಸಗುವುದನ್ನು ಸಹಿಸಲು ಆಗುವುದಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಸರಿಸುಮಾರು ಒಂದು ಲಕ್ಷಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಇದ್ದು, ಕೇವಲ ಬೆರಳೆಣಿಕೆಯಷ್ಟು ಸಿಬ್ಬಂದಿ ಮಾಡುವ ಕೆಟ್ಟ ಕೆಲಸದಿಂದ, ಇಡೀ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಋಣಾತ್ಮಕ ಭಾವನೆ ಮೂಡುತ್ತದೆ. ಅಂತಹ ಸಿಬ್ಬಂದಿಯನ್ನು ಅಮಾನತು ಮಾಡುವುದಷ್ಟೇ ಅಲ್ಲದೆ, ವಜಾ ಮಾಡುವ ಬಗ್ಗೆಯೂ ಸೂಚನೆ ನೀಡಲಾಗುವುದು ಎಂದರು.
ಮುಖ್ಯಮಂತ್ರಿಗಳ ನಿವಾಸದ ಬಳಿ ಭದ್ರತೆಗೆಂದು ನಿಯೋಜಿಸಲಾದ ಇಬ್ಬರು ಪೊಲೀಸರು ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿಕೊಂಡಿರುವುದು ಬೆಳಕಿಗೆ ಬಂದಿದೆ. ಇಂತಹ ಕೃತ್ಯ ಪತ್ತೆ ಮಾಡಿ ಕಾನೂನು ಕ್ರಮಕೈಗೊಂಡ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ. ಅವರಿಗೆ ಸೂಕ್ತ ಬಹುಮಾನ ಘೋಷಿಸಲು ನಿರ್ದೇಶನ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ನೀರಿನ ಸಂಪ್ ಸ್ವಚ್ಛಗೊಳಿಸುವಾಗ ದುರಂತ.. ಬೆಂಗಳೂರಲ್ಲಿ ತಂದೆ-ಮಗ ದಾರುಣ ಸಾವು