ಬೆಂಗಳೂರು: ಅನ್ನ ಭಾಗ್ಯ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿರುವುದನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ "ಬಿಜೆಪಿ ಬಡವರಿಗೆ ದ್ರೋಹ ಮಾಡುವ ಪಕ್ಷ. ಬಿಜೆಪಿಯ ದುರಾಡಳಿತಕ್ಕೆ ಧಿಕ್ಕಾರ ವ್ಯಕ್ತಪಡಿಸುತ್ತಿದ್ದೇವೆ.
ಮುಂದಿನ ಮಂಗಳವಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿದ್ದೇವೆ. ಈ ಬಗ್ಗೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ. ಮುಂದೆ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಮಾಡುತ್ತೇವೆ. ಪ್ರತಿಭಟನೆ ಮೂಲಕ ಜನರ ಗಮನವನ್ನು ಸೆಳೆಯಲು ಕಾರ್ಯಕ್ರಮ ರೂಪಿಸಿದ್ದೇವೆ" ಎಂದು ತಿಳಿಸಿದರು.
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ: ಐದು ಗ್ಯಾರಂಟಿಗಳನ್ನು ಜನರ ಮುಂದೆ ಇಟ್ಟಿದ್ದೇವೆ. ಗ್ಯಾರಂಟಿ ಜಾರಿಗೆ ತರುತ್ತೇವೆ ಇಲ್ಲವೋ ಎಂಬ ಪ್ರಶ್ನೆಯನ್ನು ವಿರೋಧ ಪಕ್ಷದ ನಾಯಕರು ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಸರ್ಕಾರದ ರಚನೆ ಮಾಡಿದ ಮೊದಲ ದಿನವೇ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ನೀಡಿದ್ದೆವು. ಎರಡನೇ ಕ್ಯಾಬಿಬೆಟ್ ನಲ್ಲಿ ಗ್ಯಾರಂಟಿ ಜಾರಿಯ ಟೈಮ್‌ಲೈನ್ ನಿಗದಿ ಮಾಡಿದ್ದೇವೆ. ನಾವು ನುಡಿದಂತೆ ನಡೆಯುತ್ತಿದ್ದೇವೆ. ನಮಗೆ ಜನ ಆಶೀರ್ವಾದ ಮಾಡಿದ್ದಾರೆ. ವಿರೋಧ ಪಕ್ಷ ನಾಯಕರುಗಳು ಟೀಕೆಗಳಿಗೆ ಉತ್ತರ ನೀಡಲು ನಾನು ಬಯಸಲ್ಲ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ನುಡಿದಂತೆ ನಡೆದಿದ್ದಾರೆ. ಅವರು ಆಡಿದ ಮಾತನ್ನು ಉಳಿಸಿಕೊಂಡಿದ್ದಾರೆ. ಈ ಫೆಡರಲ್ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತೇವೆ ಎಂದು ಪಿಎಂ ಕೂಡ ಹೇಳುತ್ತಿದ್ದಾರೆ. ಆದರೆ, ಯೋಜನೆಗಳಿಗೆ ಯಾವುದೇ ಸಹಕಾರ ಕೊಡುವುದಿಲ್ಲ ಎಂದು ಜೆ.ಪಿ.ನಡ್ಡಾ ಅವರು ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿದ್ದರು ಎಂದು ಟೀಕಿಸಿದರು.
ಬಡವರ ವಿಚಾರದಲ್ಲಿ ರಾಜಕಾರಣ ಸಲ್ಲದು: ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಅವರಲ್ಲಿ 34 ರೂ. ನಂತೆ ಅಕ್ಕಿ ಕೊಡುವಂತೆ ಕೇಳಿದ್ದೆವು. ಆಗ ಅವರೂ ಕೂಡ ಒಪ್ಪಿಕೊಂಡಿದ್ದರು. ಲಿಖಿತ ಪತ್ರ ಬರೆದು ಜೂ.12ಕ್ಕೆ ಜುಲೈ ಮೇಲೆ ಇ - ಹರಾಜು ಮೂಲಕ 2.84 ಲಕ್ಷ ಮೆ.ಟನ್ ಕೊಡುತ್ತೇವೆ ಎಂದಿದ್ದರು. ಮರು ದಿನ ಗೋಧಿ ಮತ್ತು ಅಕ್ಕಿ ಬಹಿರಂಗ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಆಗುವುದಿಲ್ಲ ಎಂದಿದ್ದಾರೆ. ಅವರ ಬಳಿ ಸ್ಟಾಕ್ ಇದೆ. 7 ಲಕ್ಷ ಮೆ.ಟನ್ ಇದೆ ಅಂತ ಅವರೇ ಹೇಳಿದ್ದಾರೆ. ಆದರೂ ಅವರು ಕೊಡುತ್ತಿಲ್ಲ. ನಾವು ಉಚಿತವಾಗಿ ಕೇಳುತ್ತಿಲ್ಲ. ಬಡವರ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದರು.
ಎರಡ್ಮೂರು ದಿನ ವಿಳಂಬವಾಗಬಹುದು: ಅನ್ನ ಭಾಗ್ಯ ಯೋಜನೆ ಜಾರಿ ಇನ್ನೆರಡು ಮೂರು ದಿನ ವಿಳಂಬವಾಗಬಹುದು ಎಂದು ಇದೇ ವೇಳೆ ಡಿಸಿಎಂ ಡಿಕೆಶಿ ತಿಳಿಸಿದರು. ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ಕೊಡಲೇ ಬೇಕು. ಈ ಸಂಬಂಧ ಅಕ್ಕಪಕ್ಕದ ರಾಜ್ಯಗಳ ಬಳಿ ಮಾತುಕತೆ ನಡೆಸುತ್ತಿದ್ದೇವೆ. ಬಹಿರಂಗ ಮಾರುಕಟ್ಟೆಯಲ್ಲಿ ನಾವು ಖರೀದಿ ಮಾಡಬಹುದು. ಆದರೆ ಪಾರದರ್ಶಕವಾಗಿ ಮಾಡಬೇಕು. ಸೇವಾ ಕೇಂದ್ರದ ಮೂಲಕ ದಿನಕ್ಕೆ 200 ಅರ್ಜಿ ವಿಲೇವಾರಿ ಮಾಡಲು ಆಗುವುದಿಲ್ಲ. ಹಾಗಾಗಿ ಆನ್ ಲೈನ್ ಮೂಲಕ ಮಾಡಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ಕೇಂದ್ರದ ಮಂತ್ರಿಗಳ ಭೇಟಿ: ಜೂ. 21ಕ್ಕೆ ನಾನು, ಸಿಎಂ, ಸಚಿವರು ದೆಹಲಿಗೆ ಹೋಗಿ ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಲಿದ್ದೇವೆ. ಈ ವೇಳೆ ನಾವು ಕೇಂದ್ರದ ಮಂತ್ರಿಗಳನ್ನು ಭೇಟಿಯಾಗುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ: Congress Guarantee Scheme: ಅನ್ನಭಾಗ್ಯ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ