ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್‌ಪಿಸಿಬಿ) ಅನುಮತಿ ಇಲ್ಲದೆ ನಗರದ ಮಹಾಲಕ್ಷ್ಮೀಪುರಂನಲ್ಲಿ ತಾಜ್ಯ ವಿಂಗಡಣೆ ಘಟಕ ಆರಂಭಿಸಿರುವ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಘಟಕ ಮುಚ್ಚುವ ಸಂಬಂಧ ಮಾಹಿತಿ ನೀಡುವಂತೆ ಸೂಚಿಸಿದೆ.
ವಸತಿ ಪ್ರದೇಶದಲ್ಲಿ ಆರಂಭಿಸಿರುವ ಘನತ್ಯಾಜ್ಯ ವಿಂಗಡಣಾ ಘಟಕ ಮುಚ್ಚುವಂತೆ ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಕೆಎಸ್‌ಪಿಸಿಬಿ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ವಿವಾದಿತ ಪ್ರದೇಶದಲ್ಲಿ ಘಟಕ ಆರಂಭಿಸಲು ಬಿಬಿಎಂಪಿ ನಮ್ಮಿಂದ ಯಾವುದೇ ಪರವಾನಗಿ ಪಡೆದಿಲ್ಲ ಎಂದು ತಿಳಿಸಿದರು. ಕೆಎಸ್‌ಪಿಸಿಬಿ ಅನುಮತಿ ಪಡೆಯದೆ ಪಾಲಿಕೆ ಅಧಿಕಾರಿಗಳು ಘಟಕ ಆರಂಭಿಸಿರುವ ವಿಚಾರ ತಿಳಿದು ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಬಳಿಕ ಅನುಮತಿ ಇಲ್ಲದೆ ಘಟಕ ಆರಂಭಿಸಿರುವುದರಿಂದ ಅದನ್ನು ಕೂಡಲೇ ಮುಚ್ಚಬೇಕು. ಇಲ್ಲದಿದ್ದರೆ ನಾವೇ ಮುಚ್ಚುವಂತೆ ಆದೇಶಿಸಬೇಕಾಗುತ್ತದೆ. ಈ ಕುರಿತು ಸೂಕ್ತ ವಿವರಣೆ ನೀಡಿ ಎಂದು ಪಾಲಿಕೆಗೆ ಸೂಚಿಸಿ ವಿಚಾರಣೆ ಮುಂದೂಡಿತು.
ಮಹಾಲಕ್ಷ್ಮಿಪುರಂನ ಎರಡನೇ ಹಂತದಲ್ಲಿ 1021 ಚ. ಮೀ. ವಿಸ್ತೀರ್ಣದ ನಿವೇಶನದಲ್ಲಿ ಬಿಬಿಎಂಪಿ ತ್ಯಾಜ್ಯ ತಂದು ಸುರಿದು, ಬಳಿಕ ಅಲ್ಲಿಯೇ ವಿಂಗಡಣೆ ಮಾಡುವ ಘಟಕ ಆರಂಭವಾಗಿದೆ. ಘಟಕದ ಸುತ್ತಮುತ್ತ ಶಾಲೆ, ಅಂಗಡಿಗಳು ಹಾಗೂ ವಾಸದ ಮನೆಗಳಿದ್ದು ವಾತಾವರಣ ಕಲುಷಿತಗೊಂಡಿದೆ ಎಂದು ಆರೋಪಿಸುತ್ತಿರುವ ಸ್ಥಳೀಯರು ತೆರವು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕವಾಗಿ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಪೀಠ, ಘಟಕ ಸ್ಥಾಪಿಸಲು ಪಾಲಿಕೆ ಎಲ್ಲ ಕ್ರಮಗಳನ್ನು ಅನುಸರಿಸಿದೆಯೇ ಎಂದು ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದ ಕೆಎಸ್‌ಪಿಸಿಬಿ ಘಟಕ ಸ್ಥಾಪಿಸಲು ತಮ್ಮಿಂದ ಬಿಬಿಎಂಪಿ ಅನುಮತಿ ಪಡೆದಿಲ್ಲ ಎಂದು ವರದಿ ಸಲ್ಲಿಸಿದೆ.