ಬೆಂಗಳೂರು: ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆಯು ಮಾರ್ಚ್ 28ರಿಂದ ಶುರುವಾಗಲಿದೆ. ಹೀಗಾಗಿ, ಮುಖ್ಯ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಣಿ ಕಾರ್ಯಕ್ರಮವನ್ನ ಎಸ್ಎಸ್ಎಲ್ಸಿ ಬೋರ್ಡ್ ಆಯೋಜಿಸಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿ ವರ್ಷದಂತೆ ಈ ವರ್ಷವು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಸಹಾಯವಾಣಿ ಕೇಂದ್ರಯನ್ನು ಸ್ಥಾಪಿಸಲಾಗಿದೆ. ಈ ಸೇವೆಯು ಮಾರ್ಚ್ 14 ರಿಂದ 27 ರವರೆಗೆ (ರಜಾ ದಿನಗಳನ್ನು ಒಳಗೊಂಡಂತೆ) ಹಾಗೂ ಮಾರ್ಚ್ 28 ರಿಂದ ಏಪ್ರಿಲ್ 11(ಪರೀಕ್ಷಾ ದಿನಗಳಂದು ಮಾತ್ರ) ನಿಯಂತ್ರಣ ಕೊಠಡಿಯಾಗಿ ಕಾರ್ಯನಿರ್ವಹಿಸಲಿದೆ. ಸಹಾಯವಾಣಿಯು ಬೆಳಗ್ಗೆ 9.30 ಗಂಟೆಯಿಂದ ಸೇವಾನಿರತವಾಗಲಿದೆ.
ಎಸ್ಎಸ್ಎಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ನಿರ್ಣಾಯಕ ಹಂತದ ಪರೀಕ್ಷೆಯಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಮಕ್ಕಳು ಗಳಿಸಬೇಕೆಂದು ಪೋಷಕರು ಆಸೆ ಪಡ್ತಾರೆ. ವಿದ್ಯಾರ್ಥಿಗಳ ಸಾಮರ್ಥ್ಯ, ಬುದ್ಧಿಶಕ್ತಿ, ಆಸಕ್ತಿ, ಕ್ರಿಯಾಶೀಲತೆ, ಕಠಿಣ ಪರಿಶ್ರಮ ಇವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಹೆಚ್ಚು ಅಂಕಗಳನ್ನು ಗಳಿಸಿ ಎಂದು ಅವರ ಮೇಲೆ ಒತ್ತಡವನ್ನು ಪೋಷಕರು/ಶಿಕ್ಷಕರು ಹಾಕುತ್ತಿರುವುದು ಇತ್ತೀಚಿನ ಸಮಸ್ಯೆಯಾಗಿದೆ.
ಇದನ್ನೂ ಓದಿ: ಹೆಸರಿಗೆ ಬಯಲು ಬಹಿರ್ದೆಸೆ ಮುಕ್ತ ಗ್ರಾಮ, ಅಲ್ಲಿ ಶೌಚಾಲಯಗಳೇ ಇಲ್ಲ.. ಸದನದ ಗಮನ ಸೆಳೆದ ಶಾಸಕ ಕಾಶೆಂಪುರ್
ಇದರಿಂದ ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನಹರಿಸಲಾಗದೇ, ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿರುವುದು ಕಂಡುಬಂದಿದೆ. ಈ ಸಮಸ್ಯೆ ನಿವಾರಣೆಯಾಗದೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಬರೆಯಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗಳ ನಿವಾರಣೆ ಮಾಡಿ, ಪರೀಕ್ಷೆಯನ್ನು ಸಮರ್ಥವಾಗಿ ಬರೆಯಲು ಸ್ಫೂರ್ತಿ ನೀಡಬೇಕಾದ ಅವಶ್ಯಕತೆ ಇದೆ.
ಹೀಗಾಗಿ, ಈ ರೀತಿಯ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡು ಹಿಡಿಯುವ ಹಾಗೂ ಭಯರಹಿತವಾಗಿ ಪರೀಕ್ಷೆ ಬರೆಯಲು ಆತ್ಮಸ್ಥೈರ್ಯ ತುಂಬುವ ಸದುದ್ದೇಶದಿಂದ ಈ ಸಹಾಯವಾಣಿ ಕೌನ್ಸಿಲಿಂಗ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಹೆಲ್ಪ್ ಲೈನ್ ನಂಬರ್ಗಳು:
080-23310075
080- 23310076