ಬೆಂಗಳೂರು : ಸರಿಯಾದ ಸಮಯದಲ್ಲಿ ಕಲಾಪಕ್ಕೆ ಹಾಜರಾಗುವುದನ್ನು ಪ್ರೋತ್ಸಾಹಿಸಲು ಸದಸ್ಯರಿಗೆ ಟೀ ಕಪ್ ಸಾಸರ್ ಗಿಫ್ಟ್ ನೀಡಲು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಅವರು ನಿರ್ಧರಿಸಿದ್ದಾರೆ. ಸುವರ್ಣಸೌಧದಲ್ಲಿ ಅಧಿವೇಶನದ ಪೂರ್ವಸಿದ್ಧತೆ ಪರಿಶೀಲಿಸಿ ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಜೊತೆ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಕೋರಂಗೆ ಮುನ್ನ ಕಲಾಪಕ್ಕೆ ಬರುವ ಸದಸ್ಯರನ್ನು ಗುರುತಿಸುವ ಕೆಲಸ ಮಾಡಲಾಗುತ್ತದೆ. ಸಮಯಕ್ಕೆ ಮುನ್ನ ಕಲಾಪಕ್ಕೆ ಆಗಮಿಸುವ ಸದಸ್ಯರಿಗೆ ಈ ಬಾರಿ ಟೀ ಕಪ್ ನೀಡಲಾಗುತ್ತದೆ. ಸದಸ್ಯ ಎಷ್ಟು ಸಾರಿ ಬೇಗ ಕಲಾಪಕ್ಕೆ ಬರುತ್ತಾರೋ ಅಷ್ಟು ಸಾರಿ ಟೀ ಕಪ್ ಸಾಸರ್ ನೀಡಲಾಗುತ್ತದೆ. ಈ ಟೀ ಕಪ್ ಸಾಸರ್ ರಾಜ್ಯ ಹಾಗೂ ರಾಷ್ಟ್ರೀಯ ಲಾಂಛನ ಹೊಂದಿರಲಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. ವಿಧಾನಮಂಡಲ ಅಧಿವೇಶನ ವೇಳೆ ಬರುವ ಎಲ್ಲ ಶಾಸಕರಿಗೆ, ಅಧಿಕಾರಿಗಳಿಗೆ, ಮಾಧ್ಯಮದವರಿಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಅಧಿಕಾರಿ ವರ್ಗದವರಿಗೂ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಸುವರ್ಣಸೌಧದಲ್ಲಿ ಎಲ್‌ಇಡಿ ಲೈಟಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಪ್ರತಿ ಶನಿವಾರ, ಭಾನುವಾರ ಹಾಗೂ ರಾಷ್ಟ್ರೀಯ ಹಬ್ಬದ ದಿನ ಸುವರ್ಣಸೌಧವನ್ನು ಅಲಂಕರಿಸಲಾಗುವುದು ಎಂದು ಸ್ಪೀಕರ್ ಹೇಳಿದರು.
ಶಾಲೆ ಮಕ್ಕಳಿಗೆ ಬಂದರೆ ತಕ್ಷಣ ಆಡಿಟೋರಿಯಂನಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಆಡಿಟೋರಿಯಂನಲ್ಲಿ ಸಂವಿಧಾನ ಪೀಠಿಕೆ, ಕಿರು ಚಿತ್ರ ಪ್ರದರ್ಶನವನ್ನು ಮಾಡಲಾಗುವುದು. ಹಿಂದೆ ವಿದ್ಯಾರ್ಥಿಗಳಿಗೆ 10 ನಿಮಿಷ ಮಾತ್ರ ವೀಕ್ಷಕರ ಗ್ಯಾಲರಿಯಲ್ಲಿ ಕೂರಲು ಅವಕಾಶ ನೀಡಲಾಗುತ್ತಿತ್ತು. ಈಗ ಅರ್ಧ ತಾಸು ಅವಕಾಶ ನೀಡಲು ನಿರ್ಧಾರ ಮಾಡಲಾಗಿದೆ. ಜೊತೆಗೆ ಅವರಿಗೆ ತಂಪು ಪಾನೀಯ, ಬಿಸ್ಕೆಟ್ ನೀಡಲಾಗುವುದು ಎಂದರು.
ಇನ್ನು ಕರುನಾಡು ಸುವರ್ಣ ಸಂಭ್ರಮದ ಕಾಲಘಟ್ಟದಲ್ಲಿದ್ದು, ಒಂದೊಂದು ಪ್ರದೇಶದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬೆಳಗ್ಗೆ 9-11 ಗಂಟೆವರೆಗೆ ಸುವರ್ಣಸೌಧದಲ್ಲಿ ಪ್ರದರ್ಶನ ಮಾಡಲಾಗುವುದು. ಡಿ.12ರಂದು ಸುವರ್ಣ ಸಂಭ್ರಮವನ್ನು ಸುವರ್ಣಸೌಧದಲ್ಲಿ ಆಚರಿಸಲಾಗುತ್ತಿದೆ. ಆಳ್ವಾಸ್ ನುಡಿಸಿರಿ ತಂಡದಿಂದ ಕಾರ್ಯಕ್ರಮ ನೆರವೇರಲಿದೆ ಎಂದು ಹೇಳಿದರು.
ಪ್ರತಿಭಟನೆ ಕಡಿಮೆಗೊಳಿಸಲು ಮನವಿ: ಇದೇ ವೇಳೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಪ್ರತಿಭಟನೆಗಳ ಸಂಬಂಧ ರೈತ ಮುಖಂಡರ ಜೊತೆ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಬೆಳಗಾವಿ ಅಧಿವೇಶನ ಅಂದರೆ ಸ್ಟ್ರೈಕ್ ಅಧಿವೇಶನ ಎಂದು ಬಿಂಬಿಸಲಾಗುತ್ತದೆ. ಈ ಬಾರಿ ಅದನ್ನು ಕಡಿಮೆಗೊಳಿಸುವ ಯತ್ನ ಮಾಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಇದೇ ವೇಳೆ ಸುವರ್ಣಸೌಧಕ್ಕೆ ಕಚೇರಿ ಸ್ಥಳಾಂತರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾವುದೇ ಅಧಿಕಾರಿಗಳು ಇಲ್ಲಿಗೆ ಬರಲು ಮನಸ್ಸು ತೋರುತ್ತಿಲ್ಲ. ಒಪ್ಪದಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೊರಟ್ಟಿ ಸೂಚಿಸಿದರು.
ಇದನ್ನೂ ಓದಿ : ಎಲ್ಲರೂ ಗೌರವ ಕೊಡುವುದು ನನಗಲ್ಲ, ಸ್ಪೀಕರ್ ಪೀಠಕ್ಕೆ: ವಿಧಾನಸಭಾಧ್ಯಕ್ಷ ಯು ಟಿ ಖಾದರ್