ಬೆಂಗಳೂರು: ನವಂಬರ್ 4 ರಂದು ಬಿಡುಗಡೆಯಾಗಲಿರುವ ಕೋವಿಡ್ ಸೇವೆ ಆಧಾರಿತ ಕಥಾ ಹಂದರ ಹೊಂದಿರುವ 'ಸೆಪ್ಟೆಂಬರ್ 13' (September 13)ಶೀರ್ಷಿಕೆಯ ಕನ್ನಡ ಚಲನಚಿತ್ರಕ್ಕೆ ಆರು ತಿಂಗಳ ಕಾಲ ರಾಜ್ಯ ಸರಕು ಮತ್ತು ಸೇವಾ ತೆರಿಗೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಚಿತ್ರ ನಿರ್ಮಾಪಕ ಐವಾನ್ ನಿಗ್ಗಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ನವೆಂಬರ್ 4 ರಿಂದ ಕರ್ನಾಟಕ ರಾಜ್ಯದಲ್ಲಿ ಪ್ರದರ್ಶನಗೊಳ್ಳಲಿರುವ “ಸೆಪ್ಟೆಂಬರ್ 13" (September 13) ಕನ್ನಡ ಚಲನಚಿತ್ರಕ್ಕೆ ಶೇಕಡಾ 100ರಷ್ಟು ತೆರಿಗೆ ವಿನಾಯಿತಿ ಕಲ್ಪಿಸುವಂತೆ ಮನವಿ ಮಾಡಿದ್ದು, ಈ ಮನವಿ ಪತ್ರದಲ್ಲಿ ಕೋವಿಡ್ ಕಾಲದಲ್ಲಿ ದಾದಿಯರ ಸೇವೆ, ತ್ಯಾಗ ಎತ್ತಿ ಹಿಡಿಯುವ ಆಶಯ ಈ ಚಿತ್ರದ ಕಥಾ ಹಂದರದಲ್ಲಿ ಒಳಗೊಂಡಿದೆ, ಇದರ ಜೊತೆಗೆ ಈ ಚಿತ್ರವು ವೈದ್ಯಕೀಯ ವಲಯದವರ ಗೌರವಾರ್ಥ ಸ್ಮರಿಸುವ ಬಗ್ಗೆ ಸಂದೇಶ ಸಾರುತ್ತದೆ ಎಂದು ತಿಳಿಸಿರುತ್ತಾರೆ.
ಹಾಗಾಗಿ ಈ ಮನವಿಯನ್ನು ಪರಿಗಣಿಸಿ, ಈ ಚಿತ್ರವನ್ನು ತೆರಿಗೆ ಮುಕ್ತಗೊಳಿಸಿದರೆ, ದೇಶದ ಇನ್ನಷ್ಟು ಜನರಿಗೆ ಈ ಸಂದೇಶ ಮುಟ್ಟಿಸುವಲ್ಲಿ ಸಹಕಾರಿಯಾಗುವುದರಿಂದ ಸೂಕ್ತ ಆದೇಶ ಹೊರಡಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದ ನಿರ್ದೇಶನದನ್ವಯ ತೆರಿಗೆ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯಾದ್ಯಂತ ಚಲನಚಿತ್ರ ಮಂದಿರಗಳು/ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನಗೊಳ್ಳುವ “ಸೆಪ್ಟೆಂಬರ್ 13” ಎಂಬ ಶೀರ್ಷಿಕೆಯುಳ್ಳ ಕನ್ನಡ ಚಲನಚಿತ್ರ ಪ್ರದರ್ಶನಗಳಿಗೆ ನವೆಂಬರ್ 4 ರಿಂದ ಆರು ತಿಂಗಳ ಅವಧಿಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ಹಿಂಪಾವತಿ ಸೌಲಭ್ಯವನ್ನು ಷರತ್ತುಗಳಿಗೆ ಒಳಪಟ್ಟು ನೀಡಲಾಗಿದೆ.
ಷರತ್ತುಗಳು:
• ಪ್ರದರ್ಶಕರು ಸಿನೆಮಾ ಟಿಕೆಟ್ ಮೇಲೆ ಎಸ್‌ಜಿಎಸ್‌ಟಿ ವಿಧಿಸತಕ್ಕದ್ದಲ್ಲ ಮತ್ತು ಸಂಗ್ರಹಿಸತಕ್ಕದ್ದಲ್ಲ ಹಾಗೂ ಎಸ್‌ಜಿಎಸ್‌ಟಿ ಮೊತ್ತವನ್ನು ಕಡಿತಗೊಳಿಸಿದ ದರದಲ್ಲಿಯೇ ಟಿಕೆಟ್‌ಗಳನ್ನು ಮಾರಾಟ ಮಾಡತಕ್ಕದ್ದು.
• ಸರ್ಕಾರದ ಆದೇಶವು ಜಾರಿಯಲ್ಲಿರುವ ಅವಧಿಯಲ್ಲಿ “ಸೆಪ್ಟೆಂಬರ್ 13” ಸಿನೆಮಾ ಪ್ರದರ್ಶನದ ಪ್ರವೇಶಕ್ಕೆ ಮಾರಾಟ ಮಾಡುವ ಟಿಕೆಟ್‌ಗಳ ಮೇಲೆ "ಕರ್ನಾಟಕ ಸರ್ಕಾರದ ಆದೇಶದನ್ವಯ ರಾಜ್ಯ ಜಿಎಸ್ಟಿಯನ್ನು ಸಂಗ್ರಹಿಸಿರುವುದಿಲ್ಲ" ಎಂಬ ಪದಗಳು ಪ್ರಮುಖವಾಗಿ ಎದ್ದು ಕಾಣುವಂತೆ ಇರತಕ್ಕದ್ದು,
• ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ)ನ್ನು ಪ್ರವೇಶ ಶುಲ್ಕದ ಮೇಲೆ ವಿಧಿಸದೇ ಮತ್ತು ಗ್ರಾಹಕರಿಂದ ಸಂಗ್ರಹಿಸದಿದ್ದರೂ, ಸಿನೆಮಾ ಮಂದಿರ / ಮಲ್ಟಿಪ್ಲೆಕ್ಸ್ ಪ್ರದರ್ಶಕರು ತೆರಿಗೆ ನಮೂನೆಯನ್ನು ಸಲ್ಲಿಸಿ, ಇತರ ಸಿನೆಮಾಗಳಿಗೆ ಜಮೆ ಮಾಡುವ ರೀತಿಯಲ್ಲೇ ತಮ್ಮ ಸಂಪನ್ಮೂಲದಿಂದಲೇ ರಾಜ್ಯ ಜಿಎಸ್‌ಟಿ ಮೊತ್ತವನ್ನು ಜಮೆ ಮಾಡತಕ್ಕದ್ದು.
• ಕಂಡಿಕೆ (ಸಿ) ಅನ್ವಯ ಪಾವತಿಸಿದ ಎಸ್‌ಜಿಎಸ್‌ಟಿ ಮೊತ್ತವನ್ನು ವಾಣಿಜ್ಯ ತೆರಿಗೆ ಆಯುಕ್ತರು (ಕರ್ನಾಟಕ) ನಿಗದಿಪಡಿಸಿದ ನಮೂನೆಯಲ್ಲಿ ವ್ಯಾಪ್ತಿ ಹೊಂದಿದ ಸ್ಥಳೀಯ ಜಿಎಸ್‌ಟಿ ಕಚೇರಿ / ಉಪ ಜಿಎಸ್‌ಟಿ ಕಚೇರಿಗೆ ಅರ್ಜಿ ಸಲ್ಲಿಸಿ ಹಿಂಪಾವತಿಗೆ ಕ್ಲೇಮು ಮಾಡತಕ್ಕದ್ದು.
• ಯುಕ್ತ ಅಧಿಕಾರಿಯು (ವ್ಯಾಪ್ತಿ ಹೊಂದಿದ ಸ್ಥಳೀಯ ಜಿಎಸ್‌ಟಿ ಅಧಿಕಾರಿ / ಉಪ ಜಿಎಸ್‌ಟಿ ಅಧಿಕಾರಿ) ತಮ್ಮ ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಜಂಟಿ ಆಯುಕ್ತರ ಮೂಲಕ ಹಿಂಪಾವತಿಗೆ ಅರ್ಹವಾದ ಮೊತ್ತದ ದೃಢೀಕರಣಕ್ಕಾಗಿ ವಾಣಿಜ್ಯ ತೆರಿಗೆ ಆಯುಕ್ತರು (ಕರ್ನಾಟಕ) ಇವರಿಗೆ ಶಿಫಾರಸು ಮಾಡತಕ್ಕದ್ದು. (ಎಫ್) ಪ್ರತಿ ಪ್ರದರ್ಶಕರಿಗೆ ಸಂಬಂಧಿಸಿದಂತೆ, ವಾಣಿಜ್ಯ ತೆರಿಗೆ ಆಯುಕ್ತರು, ಬೆಂಗಳೂರು ಇವರಿಂದ ಹಿಂಪಾವತಿಗೆ ದೃಢೀಕರಣಗೊಂಡ ಮೊತ್ತದ ವರದಿಯನ್ನು ಸ್ವೀಕರಿಸಿದ ನಂತರ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಇವರು ಬಟವಾಡೆಗೆ ವ್ಯವಸ್ಥೆ ಮಾಡತಕ್ಕದ್ದು.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ.. ಸಾಜಿದ್ ಖಾನ್ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ದೂರು