ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಪ್ರಕರಣವನ್ನು ಸಿಐಡಿ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸುತ್ತಿದೆ. ಹಗರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರ ಹಾಗೂ ಮಾಹಿತಿ ಇದ್ದರೆ ಸಾರ್ವಜನಿಕರು ಹಂಚಿಕೊಳ್ಳಬೇಕೆಂದು ಎಸ್ಐಟಿ ಮನವಿ ಮಾಡಿದೆ.
ಹಗರಣ ಸಂಬಂಧ ಮಾಹಿತಿ ಅಥವಾ ಸಾಕ್ಷ್ಯಾಧಾರ ಇದ್ದರೆ ಅರಮನೆ ರಸ್ತೆಯಲ್ಲಿರುವ ಸಿಐಡಿ ಪ್ರಧಾನ ಕಚೇರಿಗೆ ಬಂದು ಸಂಪರ್ಕಿಸಬಹುದು. ಅಥವಾ sitcid2023@ಗೆ ಇಮೇಲ್ ಮಾಡಬಹುದು. ಜೊತೆಗೆ 9480800151 ಸಂಖ್ಯೆಗೆ ವಾಟ್ಸ್ಆ್ಯಪ್ ಮೂಲಕ ಮಾಹಿತಿ ನೀಡಬಹುದು ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಕೋಟ್ಯಂತರ ರೂಪಾಯಿ ಬಿಟ್ ಕಾಯಿನ್ ಅವ್ಯವಹಾರ ಆರೋಪ ಸಂಬಂಧ ಪ್ರಕರಣದ ಸೂತ್ರದಾರಿ ಶ್ರೀಕಿ ಆಲಿಯಾಸ್ ಶ್ರೀಕೃಷ್ಣನನ್ನು ಸಿಸಿಬಿ ಪೊಲೀಸರು ಬಂಧಿಸಿ, ಸುದೀರ್ಘ ವಿಚಾರಣೆ ನಡೆಸಿದ್ದರು. ತನಿಖೆಯಲ್ಲಿ ಸರ್ಕಾರದ ಪೋರ್ಟಲ್ಗಳು, ಆನ್ಲೈನ್ ಗೇಮಿಂಗ್ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿತ್ತು. ತನಿಖೆ ನಡೆಸಿದ ತನಿಖಾಧಿಕಾರಿಗಳು ಹಾಗೂ ಇತರೆ ಪೊಲೀಸ್ ಸಿಬ್ಬಂದಿ ವಿರುದ್ಧವೂ ಅಕ್ರಮವೆಸಗಿರುವ ಸಂಬಂಧ ಆರೋಪ ಕೇಳಿಬಂದಿತ್ತು.
ಬಿಟ್ ಕಾಯಿನ್ ಹಗರಣದ ಹಿಂದೆ ರಾಜಕಾರಣಿಗಳ ನಂಟಿರುವ ಗುಮಾನಿ ವ್ಯಕ್ತವಾಗಿತ್ತು. ರಾಜ್ಯ ಸರ್ಕಾರವು ಈ ಸಂಬಂಧ ಪ್ರಕರಣವದ ಮರು ತನಿಖೆ ಮಾಡಲು ಕಳೆದ ಆಗಸ್ಟ್ನಲ್ಲಿ ಸಿಐಡಿಯ ಎಡಿಜಿಪಿ ಮನೀಶ್ ಕರ್ಬೀಕರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದೆ. ಹಗರಣದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ: ಶ್ರೀಕಿ ಸಹೋದರನ ವಿರುದ್ಧದ ಲುಕ್‌ಔಟ್ ಸುತ್ತೋಲೆ ರದ್ದು