ಬೆಂಗಳೂರು: ನಗರದ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಮಂಜುನಾಥ ನಗರದಲ್ಲಿ ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಕನಕ ಗುರು ಪೀಠ ಮಾಡಿದ್ದು ನಾನು, ಈಗ ಯಾರ್ಯಾರೋ ಅದರ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪಗೆ ಟಾಂಗ್ ನೀಡಿದರು. ಅಧಿಕಾರದಲ್ಲಿದ್ದಾಗ ಚೆನ್ನಮ್ಮನ ಜಯಂತಿ, ಕೆಂಪೇಗೌಡ ಜಯಂತಿ, ಕೆಂಪೇಗೌಡ ವಿಮಾನ ನಿಲ್ದಾಣವೆಂದು ಹೆಸರು ಬದಲಾವಣೆ ಮಾಡಿದ್ದು, ಬಸವಣ್ಣನ ಫೋಟೋವನ್ನು ಸರ್ಕಾರಿ ಕಚೇರಿಯಲ್ಲಿ ಹಾಕಿಸಿದ್ದು ನಾನು ಎಂದರು.
ನಂತರ ಮಾತನಾಡಿ ಈಗ ರಾಜಕೀಯ ದ್ವೇಷ ಹೊತ್ತಿಸುತ್ತಿದ್ದಾರೆ. ಸರ್ವಜನಾಂಗದ ಶಾಂತಿ ತೋಟ ಅಂತ ಕುವೆಂಪು ಹೇಳಿದ್ದರು. ಆದರೆ ಜಾತಿ ಜಾತಿಗಳ ನಡುವೆ ಜಗಳ ಹಚ್ಚುತ್ತಿದ್ದಾರೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನನಗೆ ಮತ್ತೊಮ್ಮೆ ಅವಕಾಶ ಸಿಕ್ಕಿದರೆ ಕನಕ ಭವನಕ್ಕೆ ಎಷ್ಟು ಬೇಕೋ ಅಷ್ಟು ದುಡ್ಡು ಕೊಡುತ್ತೇನೆ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ, ನಾನು ಕಳೆದ 40 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಶಾಸಕನಾಗಿ. ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ತಮ್ಮೆಲ್ಲರ ಆಶೀರ್ವಾದ ಕಾರಣ. ಅಂಥಾ ಅವಕಾಶ ಮತ್ತೊಮ್ಮೆ ಸಿಕ್ಕಿದರೆ ನಿಮ್ಮ ಎಲ್ಲಾ ಬೇಡಿಕೆಗಳನ್ನು ಪೂರ್ತಿಗೊಳಿಸುವ ಕೆಲಸ ಮಾಡುತ್ತೇನೆ ಎನ್ನುವ ಮೂಲಕ ಮತ್ತೊಮ್ಮೆ ಸಿಎಂ ಆಗುವ ಅಪೇಕ್ಷೆಯನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದರು.
ಶಾಸಕ ಮಂಜುನಾಥ್ ಮಾತನಾಡಿ, ಸಿದ್ದರಾಮಯ್ಯರನ್ನ ಹಾಡಿ ಹೊಗಳಿದರು. ಭಾಗ್ಯಗಳ ಸರದಾರ ಎನ್ನುತ್ತಲೇ ಭಾಷಣ ಆರಂಭಿಸಿದ ಮಂಜುನಾಥ್, ಅಹಿಂದ ನಾಯಕ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ನಾಯಕ. ಅತ್ಯುತ್ತಮ ಆಡಳಿತ ನೀಡಿದ ಜನನಾಯಕ ಎಂದು ಕೊಂಡಾಡಿದರು.
ತಮಗೆ ವೇದಿಕೆ ಮೇಲೆ ಮಾತನಾಡಲು ಸರಿಯಾಗಿ ಅವಕಾಶ ನೀಡದ್ದಕ್ಕೆ ಗೀತಾ ಶಿವರಾಮ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು. ಸಿದ್ದರಾಮಯ್ಯರ ಮುಂದೆ ನಾನು ಎಂಎಲ್ಎ ಆಕಾಂಕ್ಷಿ ಅಂತ ಹೇಳಿಕೊಳ್ಳಲು ಮುಂದಾದಾಗ ಸಿದ್ದರಾಮಯ್ಯರಿಂದ ಸಾಕು ಭಾಷಣ ನಿಲ್ಲಿಸುವಂತೆ ಸನ್ನೆ ಮಾಡಿದ್ದರು. ಹೀಗಾಗಿ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿ ಬಾವುಕರಾಗಿ ವೇದಿಕೆಯಿಂದ ತೆರಳಿದರು. ಈ ಮೂಲಕ ವೇದಿಕೆ ಮೇಲೆ ಮತ್ತೊಮ್ಮೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣದ ನಾಯಕರ ಮುನಿಸು ಬಯಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಮಂಜುನಾಥ್, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ನಾಗಲಕ್ಷ್ಮಿ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾ ಶಿವರಾಮ್ ಮತ್ತಿತರರು ಭಾಗವಹಿಸಿದ್ದರು
ಇದನ್ನೂ ಓದಿ:123 ಸ್ಥಾನ ಗೆದ್ದು ಜೆಡಿಎಸ್ ಶಕ್ತಿ ತೋರಿಸುತ್ತೇವೆ: ಹೆಚ್ಡಿಕೆ ವಿಶ್ವಾಸ