ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಬೆಂಗಳೂರಿನ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ನಡೆಸಿದರು. ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಚಿವ ಕೆ ಜೆ ಜಾರ್ಜ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭಾಗವಹಿಸಿದ್ದರು.
ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ಸಿದ್ದರಾಮಯ್ಯ ಮಾತನಾಡಿ, ಇಂದು ನಾವೆಲ್ಲ ಸ್ವತಂತ್ರ್ಯರಾಗಿದ್ದೇವೆ. ಇದಕ್ಕೆಲ್ಲಾ ಕಾಂಗ್ರೆಸ್ ಪಕ್ಷವೇ ಕಾರಣ. ದೇಶಕ್ಕಾಗಿ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಆ.15ರಂದು 75ನೇ ಸ್ವಾತಂತ್ರೋತ್ಸವದ ನಡಿಗೆ ಹಮ್ಮಿಕೊಂಡಿದ್ದೇವೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಭಾಗದ ಜನರು ಭಾಗವಹಿಸಲಿದ್ದಾರೆ ಎಂದರು.
ಬಿಜೆಪಿಯವರು ದೇಶಕ್ಕಾಗಿ ಸತ್ತಿದ್ದಾರಾ?: ಸಾವರ್ಕರ್ನನ್ನು ಬಿಜೆಪಿಯವರು ಹಾಡಿ ಹೊಗಳುತ್ತಾರೆ. ಆದರೆ ಸಾವರ್ಕರ್ ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಜೈಲಿನಿಂದ ಹೊರ ಬರುತ್ತಾರೆ. ಮಹಾತ್ಮ ಗಾಂಧಿ ಇವರೇನಾದರೂ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರಾ?. ಬಿಜೆಪಿಯವರು ನಮಗೆ ದೇಶಭಕ್ತಿ ಬಗ್ಗೆ ಪಾಠ ಹೇಳಿಕೊಡುತ್ತಾರೆ. ಬಿಜೆಪಿಯವರಿಗೆ ಎಂದೂ ದೇಶಭಕ್ತಿ ಇರಲಿಲ್ಲ. ದೇಶಕ್ಕಾಗಿ ಎಂದೂ ಜೈಲಿಗೆ ಹೋದವರಲ್ಲ, ಪ್ರಾಣ ತ್ಯಾಗ ಮಾಡಿದವರಲ್ಲ. ಹೆಡ್ಗೇವಾರ್, ಗೋಲ್ವಾಲ್ಕರ್ ದೇಶಕ್ಕಾಗಿ ಹೋರಾಡಿದ್ದಾರಾ? ಎಂದು ಪ್ರಶ್ನಿಸಿದರು.
ಬಿಜೆಪಿಯವರ ಹರ್ ಘರ್ ತಿರಂಗ ನಾಟಕ: ರಾಷ್ಟ್ರಧ್ವಜಕ್ಕೆ ಗೌರವ ಕೊಡುತ್ತಿರೋದು ಕಾಂಗ್ರೆಸ್. ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕಾಂಗ್ರೆಸ್ನಿಂದ ಆಗಿದೆ. ದೇಶಕ್ಕೆ ಇವರದ್ದೇನು ಕೊಡುಗೆ ಇದೆ. ಬಿಜೆಪಿಯವರ ಹರ್ ಘರ್ ತಿರಂಗ ಕೇವಲ ನಾಟಕವಷ್ಟೆ. ಲೂಟಿಯೇ ಇವರ ಕೊಡುಗೆ. ಬರೀ ಲೂಟಿ ಮಾಡೋದೆ ಇವರ ಕೆಲಸ. ಇಡೀ ದೇಶದಲ್ಲಿ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.
ಮುಂದಿನ ಸಿಎಂ ಘೋಷಣೆ: ಸಿದ್ದರಾಮಯ್ಯ ಭಾಷಣದ ವೇಳೆ ಮುಂದಿನ ಸಿಎಂ ಎಂಬ ಘೋಷಣೆ ಕೇಳಿಬಂತು. ತಕ್ಷಣ ಕೂಗಿದವರನ್ನು ಸಿದ್ದರಾಮಯ್ಯ ಗದರಿಸಿ ಬಾಯಿ ಮುಚ್ಚಿಸಿದರು. ಸಿಎಂ ಬದಲಾವಣೆ ಕುರಿತ ಕಾಂಗ್ರೆಸ್ ಟ್ವೀಟ್ ವಿಚಾರ ಮಾತನಾಡಿ, ನಾನಂತು ಟ್ವೀಟ್ ಮಾಡಿಲ್ಲ. ನಮ್ಮ ಪಕ್ಷದ ಬೇರೆಯವರು ಮಾಡಿರಬೇಕು. ನನಗೆ ಯಡಿಯೂರಪ್ಪ ಬದಲಾಯಿಸುವಾಗ ಖಚಿತ ಮಾಹಿತಿ ಇತ್ತು. ಈಗ ಬಸವರಾಜ ಬೊಮ್ಮಾಯಿ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ ಎಂದರು.
ಇದನ್ನೂ ಓದಿ: ಹರ್ ಘರ್ ತಿರಂಗ ಅಭಿಯಾನದ ಬಗ್ಗೆ ಹಗುರ ಮಾತು ಸರಿಯಲ್ಲ: ಸಿಎಂ ಬೊಮ್ಮಾಯಿ