ಬೆಂಗಳೂರು: ಹಿಂದಿನ ಸರ್ಕಾರ ಅವಧಿಯಲ್ಲಿ ಮಾಡಲಾದ ವಿವಿಧ ನಿಗಮ ಮಂಡಳಿಗಳ ಎಲ್ಲ ನಾಮನಿರ್ದೇಶನಗಳನ್ನು ರದ್ದುಪಡಿಸಿ ಆದೇಶಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳು ಮತ್ತು ಇತರೆ ಸರ್ಕಾರಿ, ಅರೆ ಸರ್ಕಾರಿ ಹಾಗೂ ಇತರ ಎಲ್ಲ ಅಧ್ಯಕ್ಷರು/ನಿರ್ದೇಶಕರು/ಸದಸ್ಯರ ನಾಮ ನಿರ್ದೇಶನಗಳನ್ನು ಮೇ.22ರಿಂದ ಜಾರಿಗೆ ಬರುವಂತೆ ರದ್ದುಪಡಿಸಿ, ಆದೇಶ ಹೊರಡಿಸಲು ಸೂಚಿಸಲಾಗಿದೆ.
ಕಾಮಗಾರಿ ತಡೆ ಹಿಡಿಯಲು ಸೂಚನೆ: ಇನ್ನು ಮುಖ್ಯಮಂತ್ರಿಗಳ ನಿರ್ದೇಶನದಂತೆ, ಈ ಹಿಂದಿನ ಸರ್ಕಾರ ಕೈಗೊಂಡಿದ್ದ ಎಲ್ಲಾ ಇಲಾಖೆಗಳ ಹಾಗೂ ಇಲಾಖೆಗಳ ಅಧೀನಕ್ಕೊಳಪಡುವ ನಿಗಮ/ಮಂಡಳಿ/ಪ್ರಾಧಿಕಾರಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಎಲ್ಲ ಮುಂದಿನ ಹಣ ಬಿಡುಗಡೆ/ಪಾವತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆ ಹಿಡಿಯಲು ಹಾಗೂ ಪ್ರಾರಂಭವಾಗದಿರುವ ಎಲ್ಲಾ ಕಾಮಗಾರಿಗಳನ್ನು ಸಹ ತಡೆ ಹಿಡಿಯಲು ತಿಳಿಸಲಾಗಿದೆ.
ಮುಖ್ಯಮಂತ್ರಿ ಸಚಿವಾಲಯಕ್ಕೆ ಹೊಸ ನಿಯೋಜನೆ: ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಅಧಿಕಾರಿಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ. ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಮನ್ವಯಕರಾಗಿದ್ದ ಹಿರಿಯ ಪತ್ರಕರ್ತ ಕೆ.ವಿ.ಪ್ರಭಾಕರ್ ಅವರನ್ನು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಜೊತೆಗೆ ಕೆ.ವಿ.ಪ್ರಭಾಕರ್ ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನವನ್ನೂ ಕೂಡಾ ನೀಡಲಾಗಿದೆ.
ಅಂತೆಯೇ ರಾಜ್ಯ ಸರ್ಕಾರದ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್ ಅವರನ್ನು ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಸಹವರ್ತಿ ಪ್ರಭಾರದಲ್ಲಿರಿಸಿ ನೇಮಕ ಮಾಡಲಾಗಿದೆ. ಪೌರಾಡಳಿತ ಇಲಾಖೆಯ ಜಂಟಿ ನಿರ್ದೇಶಕ ಬಿ ಶಿವಸ್ವಾಮಿ ಅವರನ್ನು ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಆಪ್ತ ಕಾರ್ಯದರ್ಶಿಯಾಗಿದ್ದ ಕರ್ನಾಟಕ ಆಡಳಿತ ಸೇವೆಯ ಆಯ್ಕೆ ಶ್ರೇಣಿ ಅಧಿಕಾರಿ ಡಾ.ವೆಂಕಟೇಶಯ್ಯ ಅವರನ್ನು ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯ ಸಂದರ್ಭದಲ್ಲಿ ವಿಶೇಷಾಧಿಕಾರಿಯಾಗಿದ್ದ ಎಂ ವೆಂಕಟೇಶ್ ಅವರನ್ನು ಮುಖ್ಯಮಂತ್ರಿಯವರ ಪದಾವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮುಖ್ಯಮಂತ್ರಿಯವರ ವಿಶೇಷಾಧಿಕಾರಿಯಾಗಿ ಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಲಾಗಿದೆ.
ಮುಖ್ಯಮಂತ್ರಿ ಪರಿಹಾರ ನಿಧಿಯ ಜಂಟಿ ಕಾರ್ಯದರ್ಶಿ ಹುದ್ದೆಗೆ ಪಿ ಎ ಗೋಪಾಲ್ ಅವರನ್ನು ಮುಖ್ಯಮಂತ್ರಿ ಪದಾವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಜಂಟಿ ಕಾರ್ಯದರ್ಶಿ ಗೋಪಾಲ್ ಅವರು ಸಿದ್ದರಾಮಯ್ಯ, ಹೆಚ್. ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿಯೂ ಇದೇ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದರು.
ಪೌರಾಡಳಿತ ಇಲಾಖೆಯಲ್ಲಿ ಪ್ರಸ್ತುತ ಸ್ಥಳ ನಿರೀಕ್ಷೆಯಲ್ಲಿರುವ ಡಾ.ಕೆ.ವೈಷ್ಣವಿ ಅವರನ್ನು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ನಿಯೋಜನೆಯ ಮೇರೆಗೆ ನೇಮಕ ಮಾಡಲಾಗಿದೆ. ಅಂತೆಯೇ, ಕೆ.ಎನ್. ವಿಜಯ ಅವರನ್ನೂ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಲಾಗಿದೆ. ಈ ಇಬ್ಬರು ವಿಶೇಷ ಕರ್ತವ್ಯಾಧಿಕಾರಿಗಳನ್ನೂ ಮುಖ್ಯಮಂತ್ರಿಯವರ ಪದಾವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೂವರು ಸಚಿವರಿಗೆ ಕೊಠಡಿ ಹಂಚಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸಹೋದ್ಯೋಗಿಗಳಲ್ಲಿ ಮೂವರು ಸಚಿವರಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಸಚಿವ ಕೆ.ಜೆ.ಜಾರ್ಜ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 317 ಮತ್ತು 317 ಎ, ಎಂ.ಬಿ.ಪಾಟೀಲ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 344 ಮತ್ತು 344 ಎ ಹಾಗೂ ಬಿ.ಜೆಡ್.ಜಮೀರ್ ಅಹಮದ್ ಖಾನ್ ಅವರಿಗೆ ವಿಕಾಸಸೌಧದ ಮೊದಲನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ143 ಮತ್ತು 146 ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಉತ್ಸಾಹದಲ್ಲಿ ಹೊಸ ಸದಸ್ಯರು, ವಿಧಾನಸಭೆ ಮೊಗಸಾಲೆಯಲ್ಲಿ ಫೋಟೋ ಸೆಷನ್ !